ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು: ಮಾಸ್ಕ್‌ಮ್ಯಾನ್‌ ಜೊತೆ ಕೆಲಸ ಮಾಡಿದ್ದ ಕೆಲಸಗಾರ

Public TV
3 Min Read

– ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಮಂಡ್ಯ ಮೂಲದ ರಾಜು 
– ಆತ ಹಣಕ್ಕಾಗಿ ಈ ರೀತಿಯ ಆರೋಪ ಮಾಡಿರುವ ಸಾಧ್ಯತೆಯಿದೆ
– ಈಗ ಏನು ಹೇಳಿದ್ದೇನೋ ಅದನ್ನೇ ನಾನು ಎಸ್‌ಐಟಿಗೆ ತಿಳಿಸಿದ್ದೇನೆ

ಬೆಂಗಳೂರು: ಅನಾಮಿಕ ವ್ಯಕ್ತಿ ಹಣಕ್ಕೆ ಧರ್ಮಸ್ಥಳ ದೇವಸ್ಥಾನದ ಮೇಲೆ ಆರೋಪ ಮಾಡಿರುವ ಸಾಧ್ಯತೆಯಿದೆ ಎಂದು ಈ ಹಿಂದೆ ದೇವಸ್ಥಾನದಲ್ಲಿ ಕಸ ಗುಡಿಸುತ್ತಿದ್ದ ಮಂಡ್ಯ ಮೂಲದ ರಾಜು ಹೇಳಿದ್ದಾರೆ.

ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ನಾನು ನಾಲ್ಕು ವರ್ಷಗಳ ಕಾಲ ಧರ್ಮಸ್ಥಳದಲ್ಲಿ‌ 10 ವರ್ಷಗಳ ಹಿಂದೆ ಕೆಲಸ ಮಾಡಿದ್ದೇನೆ. ನಮಗೆ ಮಾಹಿತಿ ಕಚೇರಿಯಿಂದ ವಿಷಯ ತಿಳಿಸಲಾಗಿತ್ತು. ಆಗ ನಾವು ಹೆಣಗಳನ್ನು ಎತ್ತಿ ದಡಕ್ಕೆ ತರುತ್ತಿದ್ದೆವು. ನಂತರ ಅದನ್ನು ಅಂಬುಲೆನ್ಸ್‌ ಮೂಲಕ ಬೆಳ್ತಂಗಡಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿಸಿದರು.

ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು. ಶವ ಹೂತಿದ್ದರೆ ಮೂಳೆಗಳು ಸಿಗಬೇಕಿತ್ತು. ಜೆಸಿಬಿ ತಂದರೂ ಮೂಳೆ ಸಿಕ್ಕಿಲ್ಲ. ಕೆಲಸ ಕೊಟ್ಟ ಧಣಿಗಳ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಇದು ಬಹಳ ತಪ್ಪು ಎಂದು ಹೇಳಿದರು. ಇದನ್ನೂ ಓದಿ: Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್

 


ಪಬ್ಲಿಕ್‌ ಟಿವಿಗೆ ರಾಜು ತಿಳಿಸಿದ್ದೇನು?
ಮೊದಲು ಇಲ್ಲಿ ನನ್ನ ಅತ್ತೆ, ಮಾವ ಇಲ್ಲಿ ಸಚ್ಛತಾ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ಹುಷಾರಿಲ್ಲದ ಕಾರಣ ನಾನು ಹೋಗಿದ್ದೆ. ಈ ಸಂದರ್ಭದಲ್ಲಿ ನಮ್ಮ ಕುಟುಂಬ ಮತ್ತು ಮಾಸ್ಕ್‌ ಮ್ಯಾನ್‌ ಕುಟುಂಬ ಹತ್ತಿರ ಹತ್ತಿರ ನೆಲೆಸಿದ್ದೆವು.

ನಾನು ದೇವಸ್ಥಾನ, ನೇತ್ರಾವತಿ ಸ್ನಾನಘಟ್ಟ, ಬಾಹುಬಲಿ ಬೆಟ್ಟದಲ್ಲಿ ಕೆಲಸ ಮಾಡಿದ್ದೇನೆ. ಮೂರು ತಿಂಗಳಿಗೊಮ್ಮೆ ಕೆಲಸದ ಜಾಗ ಬದಲಾವಣೆ ಆಗುತ್ತಿತ್ತು. ಧಣಿಗಳು ಯಾವತ್ತೂ ಆ ಕೆಲಸ ಮಾಡು ಈ ಕೆಲಸ ಮಾಡು ಎಂದು ಹೇಳುತ್ತಿರಲಿಲ್ಲ. ಎದುರು ಸಿಕ್ಕಿದಾಗ ನಾವು ನಮಸ್ಕಾರ ಮಾಡುತ್ತಿದ್ದೆವು.

ಮಾಹಿತಿ ಕಚೇರಿಯಿಂದ ಬರುತ್ತಿದ್ದ ಸೂಚನೆಯ ಮೇರೆಗೆ ಕೆಲಸ ಮಾಡುತ್ತಿದ್ದೆವು. ಮಕ್ಕಳು ನಾಪತ್ತೆಯಾಗಿದ್ದರೆ ಮೈಕ್‌ ಮೂಲಕ ಪ್ರಕಟಣೆ ಹೊರಡಿಸಲಾಗುತ್ತಿತ್ತು. ಮಾಹಿತಿ ಕಚೇರಿ ಮತ್ತು ನೇತ್ರಾವತಿ ಬಳಿ ಪ್ರಕಟಣೆಯಾಗುತ್ತಿತ್ತು. ಮಕ್ಕಳು ಸಿಕ್ಕಿದರೆ ಮಾಹಿತಿ ಕಚೇರಿಗೆ ಬಿಡುತ್ತಿದ್ದರು. ನಂತರ ಪೋಷಕರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅವರಿಗೆ ಮಕ್ಕಳನ್ನು ಅವರಿಗೆ ಹಸ್ತಾಂತರ ಮಾಡಲಾಗುತ್ತಿತ್ತು.

ನಾನು ನಾಲ್ಕು ವರ್ಷದ ಕೆಲಸ ಅವಧಿಯಲ್ಲ ನೇತ್ರಾವತಿ ಬಳಿ ಎರಡು ಶವ ಸಿಕ್ಕಿತ್ತು. ಸಿಕ್ಕಿದ ಕೂಡಲೇ ಹೆಣವನ್ನು ಹೂಳುತ್ತಿರಲಿಲ್ಲ. ಶವ ಎತ್ತಿದ ನಂತರ ಅಂಬುಲೆನ್ಸ್‌ ಬರುತ್ತಿತ್ತು. ವೈದ್ಯರು, ಪೊಲೀಸರು ಬರುತ್ತಿದ್ದರು. ನಂತರ ಆ ದೇಹವನ್ನು ಬೆಳ್ತಂಗಡಿಗೆ ಕಳುಹಿಸಲಾಗುತ್ತಿತ್ತು. ನಾನು ಇದ್ದಾಗ ಪುರುಷ ಮತ್ತು ಮಹಿಳೆಯ ಶವ ಸಿಕ್ಕಿತ್ತು. ಅದನ್ನು ಬೆಳ್ತಂಗಡಿಗೆ ತೆಗೆದುಕೊಂಡು ಹೋಗಲಾಗಿತ್ತು. ಸಾವಿರಾರು ಶವ ಸಿಕ್ಕಿದೆ ಎನ್ನುವುದು ಸುಳ್ಳು.

 

ಯಾರು ನೇತ್ರಾವತಿ ಬಳಿ ಕೆಲಸ ಮಾಡುತ್ತಿದ್ದರೋ ಅವರು ಶವವನ್ನು ಎತ್ತುತ್ತಿದ್ದರು. ಶವ ಎತ್ತಿದ ದಿವಸ ನಮ್ಮ ಕೆಲಸಕ್ಕೆ ರಜೆ ಇರುತ್ತಿತ್ತು. ಒಟ್ಟು ನಾಲ್ಕು ಕುಟುಂಬಗಳು ಸ್ವಚ್ಛತಾ ಕೆಲಸ ಮಾಡುತ್ತಿದ್ದವು. ಮಾಹಿತಿ ಕಚೇರಿ ಬಿಟ್ಟರೆ ಬೇರೆ ಯಾರೂ ನಮಗೆ ಆ ಕೆಲಸ ಮಾಡು, ಈ ಕೆಲಸ ಮಾಡು ಎಂದು ಹೇಳುತ್ತಿರಲಿಲ್ಲ. ನಮಗೆ ಧಣಿಗಳು ಕೈಯಾರೆ ಸಂಬಳ ಕೊಡುತ್ತಿರಲಿಲ್ಲ.

ನಮ್ಮ ಜೊತೆ ಕೆಲಸ ಮಾಡುವಾಗ ಮಾಸ್ಕ್‌ಮ್ಯಾನ್‌ ಚೆನ್ನಾಗಿಯೇ ಇದ್ದ. ನಾವು ಬರುವ ಮೊದಲೇ ಅವರ ಕುಟುಂಬ ಅಲ್ಲಿ ನೆಲೆಸಿತ್ತು. ನಾನು ಕೆಲಸ ಬಿಟ್ಟು ಬಂದ ನಂತರವೂ ಆತ ಅಲ್ಲಿ ಕೆಲಸ ಮಾಡುತ್ತಿದ್ದ. ಆತ ಶವದಿಂದ ಚಿನ್ನ ಕದಿಯುತ್ತಿದ್ದ ವಿಚಾರ ನನಗೆ ಗೊತ್ತಿಲ್ಲ. ನಾನು ಬಿಟ್ಟ ಬಂದ ನಂತರ ಆತ ಯಾಕೆ ಕೆಲಸ ಬಿಟ್ಟ ಅನ್ನೋದು ಗೊತ್ತಿಲ್ಲ.

ಎಸ್‌ಐಟಿಯವರು ನನ್ನನ್ನು ವಿಚಾರಣೆ ನಡೆಸಿದ್ದರು. ನಾನು ಟಿವಿಗೆ ಈಗ ಏನು ಹೇಳುತ್ತಿದ್ದೇನೋ ಅದನ್ನೇ ಹೇಳಿದ್ದೇನೆ. ಮುಂದೆ ಕೋರ್ಟ್‌ನವರು ಏನಾದರೂ ಹೇಳಬೇಕಾದರೂ ಇದನ್ನೇ ಹೇಳುತ್ತೇನೆ. ನಮಗೆ ಉದ್ಯೋಗ, ಅನ್ನ ಕೊಟ್ಟ ಧಣಿಯ ವಿರುದ್ಧ ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ.

Share This Article