ಧರ್ಮಸ್ಥಳ ಫೈಲ್ಸ್ – ಸಮಾಧಿಯೊಳಗಿನ `ಸತ್ಯ’ ಹೇಳುತ್ತಾ ಅಸ್ಥಿಪಂಜರ?

Public TV
2 Min Read

ಬೆಂಗಳೂರು/ಮಂಗಳೂರು: ಬೇಡದ ಕಾರಣಕ್ಕೆ ಧರ್ಮಸ್ಥಳ (Dharmasthala) ಮತ್ತೆ ಸುದ್ದಿಯಲ್ಲಿದೆ. ಧರ್ಮಸ್ಥಳ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನ ಹೂಳಲಾಗಿದೆ ಎಂಬ ಪ್ರಕರಣಕ್ಕೆ ಇದೀಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಇದನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿದೆ. ಹಿರಿಯ ಐಪಿಎಸ್ ಅಧಿಕಾರಿ (IPS Officer) ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ. ಐಪಿಎಸ್ ಅಧಿಕಾರಿಗಳಾದ ಎಂಎನ್ ಅನುಚೇತ್, ಸೌಮ್ಯಲತಾ ಹಾಗೂ ಜಿತೇಂದ್ರ ಕುಮಾರ್ ದಯಾಮ ತನಿಖಾ ತಂಡದಲ್ಲಿರುತ್ತಾರೆ. ಆದಷ್ಟು ಬೇಗ ತನಿಖೆ ಮುಗಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಹೊರಬರುತ್ತಾ ನಿಗೂಢ ಸತ್ಯ?
ಕಳೆದ ಜೂನ್ 22ರಂದು ವಕೀರಾದ ಓಜಸ್ವಿ ಗೌಡ ಹಾಗೂ ಸಚಿನ್ ದೇಶಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದರು. ವ್ಯಕ್ತಿಯೊಬ್ಬ ಶವ ಹೂತಿಟ್ಟ ಪ್ರಕರಣದ ಮಾಹಿತಿಯನ್ನ ಬಹಿರಂಗಗೊಳಿಸಿದ್ದರು..

ಅನಾಮಿಕ ವ್ಯಕ್ತಿಯೊಬ್ಬ ಯಾರದ್ದೊ ಒತ್ತಡಕ್ಕೆ ಹೆದರಿ ನೂರಾರು ಶವ ವಿಲೇವಾರಿ ಮಾಡಿದ್ದಾನೆ ಎನ್ನಲಾದ ಸುದ್ದಿಯು ತೀವ್ರ ಸಂಚಲನಕ್ಕೆ ಕಾರಣವಾಯ್ತು. ಅಲ್ಲದೇ ಆತ ಬೆಳ್ತಂಗಡಿ ಪೊಲೀಸರಿಗೆ (Belthangady Police) ಹೂತಿಟ್ಟಿದ್ದ ತಲೆ ಬುರುಡೆ ತಂದುಕೊಟ್ಟಿದ್ದಾನೆಂಬ ಸುದ್ದಿಯೂ ಹೊರಬಿತ್ತು. ಇದಾದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡರು. ಇದನ್ನು ಇಷ್ಟಕ್ಕೆ ಬಿಡದ ಅನಾಮಿಕ, ಜುಲೈ ಮೂರರಂದು ವಕೀಲರ ಸಹಾಯದೊಂದಿಗೆ ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡಿದ್ದ. ಅದರಲ್ಲಿ ಭಯಾನಕ ಅಂಶಗಳನ್ನು ಉಲ್ಲೇಖಿಸಿದ್ದ.

ಪಾಪಪ್ರಜ್ಞೆ ಕಾಡಿದ ದೂರುದಾರ ಹೇಳಿದ್ದೇನು?
1995ರಿಂದ 2014ರ ವರೆಗೆ ಧರ್ಮಸ್ಥಳದ ನೌಕರನಾಗಿದ್ದೆ. ನಾನು ಹಲವು ಶವಗಳನ್ನು ವಿಲೇವಾರಿ ಮಾಡಿದ್ದೇನೆ. ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು. ಇವೆಲ್ಲ ಅನಾಥ ಶವಗಳು ಅಂತ ನಾನು ಭಾವಿಸಿದ್ದೆ. ಆನಂತರ ನನಗೆ ಅನುಮಾನ ಬರಲು ಶುರುವಾಯ್ತು. ಕೆಲ ಮಹಿಳೆಯರ ಶವಗಳು ನಗ್ನ ಸ್ಥಿತಿಯಲ್ಲಿದ್ದವು. ಲೈಂಗಿಕ ಆಕ್ರಮಣ, ಹಿಂಸೆಯ ಕುರುಹುಗಳಿದ್ದವು. ನಾನು ಪೊಲೀಸರಿಗೆ ಹೇಳಲು ಮುಂದಾದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಶವ ಹೂತಿಟ್ಟ ವಿಚಾರ ಬಯಲು ಮಾಡದಂತೆ ಬೆದರಿಸಿದರು. ನಿನ್ನನ್ನೂ ಹೂತು ಹಾಕುತ್ತೇನೆ ಅಂತ ಬೆದರಿಕೆ ಹಾಕಿದ್ದರು. ನಾನು ಜೀವಭಯದಿಂದ 11 ವರ್ಷಗಳ ಹಿಂದೆ ಧರ್ಮಸ್ಥಳ ತೊರೆದೆ. ಈಗ ನನಗೆ ಪಾಪಪ್ರಜ್ಞೆ ಕಾಡುತ್ತಿದೆ. ಕೊಲೆಪಾತಕರು, ಅತ್ಯಾಚಾರಿಗಳು ಯಾರೆಂದು ಗೊತ್ತಾಗಬೇಕು. ಹೂತು ಹಾಕಿರುವ ಸ್ಥಳವನ್ನು ತೋರಿಸಲು ನಾನು ಸಿದ್ಧ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ. ಈ ರೀತಿ ಪೊಲೀಸರಿಗೆ ಶವ ವಿಲೇವಾರಿ ಮಾಡಿದ್ದ ಅನಾಮಿಕ ವ್ಯಕ್ತಿ ದೂರು ನೀಡಿದ್ದ. ಅಲ್ಲದೇ ಬೆಳ್ತಂಗಡಿ ನ್ಯಾಯಾಲಯದಲ್ಲೂ ಈ ಸಂಬಂಧ ಹೇಳಿಕೆ ದಾಖಲಿಸಿದ್ದ. ಮುಸುಕುಧಾರಿಯಾಗಿ ಬಂದು ನ್ಯಾಯಾಧೀಶರ ಮುಂದೆ ಪ್ರಕರಣದ ವಿವಿರ ನೀಡಿದ್ದ.

ನ್ಯಾಯಾಧೀಶರ ಮುಂದೆ ಬಿಎನ್‌ಎಸ್ ಸೆಕ್ಷನ್‌ 164 ಅಡಿ ಹೇಳಿಕೆ ದಾಖಲು ಮಾಡಿದ ನಂತ್ರ ಪ್ರಕರಣ ಇನ್ನಷ್ಟು ಕಾವೇರ ತೊಡಗಿತು. ಎಲ್ಲೆಡೆ ಶವ ಹೂತಿಟ್ಟ ವಿಚಾರವೇ ತೀವ್ರ ಚರ್ಚೆಗೆ ಗ್ರಾಸವಾಯ್ತು. ಕೆಲ ಹಿರಿಯ ವಕೀಲರು ಹಾಗೂ ನಿವೃತ್ತ ನ್ಯಾಯಾಧೀಶರು ಕೂಡ ಸಮಗ್ರ ತನಿಖೆಗೆ ಒತ್ತಾಯಿಸಿದ್ದರು. ಕೆಲವರು ಮುಖ್ಯಮಂತ್ರಿಗಳನ್ನ ಖುದ್ದು ಭೇಟಿ ಮಾಡಿ ಆಗ್ರಹಿಸಿದ್ದರು. ಅದರಂತೆ ಸರ್ಕಾರ ಎಸ್‌ಐಟಿ ರಚಿಸಿದೆ. ಹೂತಿಟ್ಟ ಹತ್ಯಾಕಾಂಡ ನಿಜವಾ..? `ಕಂಕಾಳ’ಗಳ ಕರಾಳ ಕಥೆಗಳಿಗೆ ನಿಜಕ್ಕೂ ಆಧಾರ ಉಂಟಾ..? ನೇತ್ರಾವತಿ ತೀರದ ಭಯಾನ`ಕತೆ’ಯ ವಾಸ್ತವತೆ ಏನು..? ಈ ಎಲ್ಲದಕ್ಕೂ ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.

Share This Article