ಬೆಂಗಳೂರು: ಧರ್ಮಸ್ಥಳ ಹೂತಿಟ್ಟ ಶವ ಪ್ರಕರಣಕ್ಕೆ (Dharmasthala Burial Case) ಸಂಬಂಧಿಸಿದಂತೆ ರಚನೆಯಾಗಿರುವ ವಿಶೇಷ ತನಿಖಾ ತಂಡದಿಂದ (SIT) ಓರ್ವ ಐಪಿಎಸ್ ಅಧಿಕಾರಿಯನ್ನು ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ತನಿಖಾ ತಂಡದಿಂದ ಕೈಬಿಡುವಂತೆ ಸಿಎಆರ್ ಕೇಂದ್ರಸ್ಥಾನದ ಉಪ ಪೊಲೀಸ್ ಆಯುಕ್ತರಾದ ಸೌಮ್ಯಲತಾ (Soumyalatha) ಮನವಿ ಮಾಡಿದ್ದರು. ವೈಯಕ್ತಿಕ ಕಾರಣ ನೀಡಿ ಸೌಮ್ಯಲತಾ ಹಿಂದೆ ಸರಿದಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಎಸ್‌ಐಟಿ ಮುಖ್ಯಸ್ಥ ಡಾ. ಪ್ರಣವ್ ಮೊಹಂತಿ ತಂಡದಿಂದ ಅವರ ಹೆಸರನ್ನು ಕೈಬಿಡಲು ಶಿಫಾರಸು ಮಾಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – ಎಸ್‌ಐಟಿ ತಂಡಕ್ಕೆ ಹೆಚ್ಚುವರಿ 20 ಅಧಿಕಾರಿಗಳ ನೇಮಕ
ಸೌಮ್ಯಲತಾ ಬೆನ್ನಲ್ಲೇ ಮತ್ತೊಬ್ಬ ಅಧಿಕಾರಿಯೂ ಹಿಂದೆ ಸರಿಯುವ ತೀರ್ಮಾನ ಕೈಗೊಂಡಿದ್ದಾರೆ. ಈ ಹಿಂದೆ ಅದೇ ಕ್ಷೇತ್ರದಲ್ಲಿ ವಿದ್ಯಾರ್ಥಿ ಆಗಿದ್ದ ಕಾರಣ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.
ಬೆಂಗಳೂರು ಆಂತರಿಕ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಡಾ. ಪ್ರಣವ್ ಮೊಹಂತಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಎಸ್‌ಐಟಿ ತಂಡದಲ್ಲಿ ನೇಮಕಾತಿ ವಿಭಾಗದ ಉಪ ಪೊಲೀಸ್ ಮಹಾ ನಿರೀಕ್ಷಕ ಎಂ.ಎನ್ ಅನುಚೇತ್, ಸಿಎಆರ್ ಕೇಂದ್ರಸ್ಥಾನದ ಉಪ ಪೊಲೀಸ್ ಆಯುಕ್ತರಾದ ಸೌಮ್ಯಲತಾ ಹಾಗೂ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಅವರನ್ನು ತಂಡದ ಸದಸ್ಯರನ್ನಾಗಿ ನೇಮಿಸಿತ್ತು