Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್‌

Public TV
2 Min Read

– ಕುಟುಂಬದ ಜೊತೆ ಚರ್ಚಿಸಿ ಮುಂದೆ ಕಾನೂನು ಸಮರ
– ನನ್ನ ತಂಗಿ ಅವರ ಮಗಳಾಗಲು ಹೇಗೆ ಸಾಧ್ಯ?

ಮಡಿಕೇರಿ: ನನ್ನ ತಂಗಿಯ ಫೋಟೋವನ್ನು ಇಟ್ಟುಕೊಂಡು ಸುಜಾತ ಭಟ್‌ (Sujatha Bhat) ತನ್ನ ಮಗಳು ಅನನ್ಯಾ ಭಟ್‌ (Ananya Bhat) ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವಾಸಂತಿ (Vasanthi) ಅವರ ಸಹೋದರ ವಿಜಯ್‌ ಹೇಳಿದ್ದಾರೆ.

ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ನನ್ನ ತಂಗಿಯ ಫೋಟೋವನ್ನು ದುರ್ಬಳಕೆ ಮಾಡಲಾಗುತ್ತಿದೆ. ವಾಸಂತಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳಲ್ಲ. ಆಕೆ ಕೊಡವ ಸಮಾಜಕ್ಕೆ ಸೇರಿದವಳು. ನನ್ನ ತಂಗಿಯ ಫೋಟೋ ನೋಡಿ ನಾವು ಆಘಾತಗೊಂಡಿದ್ದೇವೆ ಎಂದು ತಿಳಿಸಿದರು.

ನನ್ನ ತಂಗಿ ಮತ್ತು ಶ್ರೀವತ್ಸ ಪ್ರೀತಿಸಿ 2007 ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಒಂದೇ ತಿಂಗಳಿಗೆ ವಿರಾಜಪೇಟೆಗೆ ಆಗಮಿಸಿದ್ದರು. ನಂತರ ಅವರು ಕೆದ್ದಮುಳ್ಳುರು ಗ್ರಾಮದ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಪರಿಚಿತ ಶವ ಪತ್ತೆಯಾದ ಬಳಿಕ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮೃತದೇಹದಲ್ಲಿದ್ದ ಬಟ್ಟೆ ಹಾಗೂ ಅವರ ಚಹರೆಗಳನ್ನು ತೋರಿಸಿದಾಗ ನನ್ನ ಸಹೋದರಿ ಎನ್ನುವುದು ದೃಢಪಟ್ಟಿತ್ತು ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್‌!

 

ನನ್ನ ತಂಗಿಯನ್ನು ಅವರು ತನ್ನ ಮಗಳು ಎಂದು ಹೇಗೆ ಹೇಳುತ್ತಾರೆ? ಆ ಫೋಟೋ ನೋಡಿದರೆ 100% ನನ್ನ ತಂಗಿ ಎನ್ನುವುದು ಗೊತ್ತಾಗುತ್ತದೆ. ಈಗ ಎಸ್‌ಐಟಿಯವರು ತನಿಖೆ ನಡೆಸುತ್ತಿದ್ದಾರೆ. ಮುಂದೆ ಕುಟುಂಬದರ ಜೊತೆ ಚರ್ಚಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅನನ್ಯಾ ಭಟ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿಂತೆ ಯಾವುದೇ ದಾಖಲೆಯನ್ನು ಸುಜಾತ ಭಟ್‌ ಬಿಡುಗಡೆ ಮಾಡಿರಲಿಲ್ಲ. ಕೊನೆಗೆ ಯಾವುದಾದರೂ ಫೋಟೋ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸುಜಾತ ಭಟ್‌ ಫೋಟೋ ಬಿಡುಗಡೆ ಮಾಡಿದ್ದರು. ಆದರೆ ಈಗ ಬಿಡುಗಡೆಯಾದ ಫೋಟೋ ಮೃತಪಟ್ಟ ವ್ಯಕ್ತಿಯ ಫೋಟೋ ಎನ್ನವ ವಿಚಾರ ಬೆಳಕಿಗೆ ಬಂದಿದೆ.

ಸುಜಾತ ಭಟ್ ಹೇಳಿದ್ದೇನು?
ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ತಮ್ಮ ಮಗಳು ಅನನ್ಯಾ ಭಟ್ 2003ರಲ್ಲಿ ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಳು. ಇಬ್ಬರು ಸ್ನೇಹಿತರು ಬಟ್ಟೆ ತರಲು ಹೋಗುತ್ತೇವೆ ಎಂದು ಹೇಳಿ ದೇವಾಲಯದ ಬಳಿ ಬಿಟ್ಟುಹೋಗಿದ್ದು, ವಾಪಸ್ ಬಂದಾಗ ಅನನ್ಯಾ ಇರಲಿಲ್ಲ. ಅಂದಿನಿಂದ ಅನನ್ಯಾ ನಾಪತ್ತೆಯಾಗಿದ್ದಾಳೆ.

ಮಗಳು ನಾಪತ್ತೆಯಾದ ಬಳಿಕ ದೂರು ನೀಡಲು ಹೋದಾಗ ಅಂದಿನ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ನನಗೆ ಧರ್ಮಸ್ಥಳದಲ್ಲಿ ಹೊಡೆಯಲಾಗಿತ್ತು ಎಂದೆಲ್ಲ ಆರೋಪ ಮಾಡಿದ್ದರು.

Share This Article