ಮೂಟೆಗಟ್ಟಲೇ ಚಿಲ್ಲರೆ ಹಣವನ್ನು ದೇವರಿಗೆ ಎಸೆಯುತ್ತಾರೆ ಭಕ್ತರು!

Public TV
2 Min Read

ಚಿತ್ರದುರ್ಗ: ಚಿಲ್ಲರೆ ಹಣವನ್ನು ಭಕ್ತರು ದೇವಾಲಯದ ಹುಂಡಿ ಅಥವಾ ತಟ್ಟೆಗೆ ಹಾಕೋದು ಸಾಮಾನ್ಯ. ಆದರೆ ಇಲ್ಲೊಂದು ವಿಶಿಷ್ಟ ಹರಕೆ ಇದೆ. ತಮ್ಮ ಕಷ್ಟಗಳನ್ನು ನಿವಾರಿಸಿದರೆ ಭಕ್ತರು ಚಿಲ್ಲರೆ ಹಣವನ್ನು ದೇವರ ಮೇಲೆ ಎರಚಿ ತಮ್ಮ ಭಕ್ತಿಯನ್ನು ನಿವೇದಿಸಿಕೊಳ್ಳುತ್ತಾರೆ. ಇಂತಹ ವಿಶಿಷ್ಟ ಹರಕೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚೀಪುರದ ವರದರಾಜಸ್ವಾಮಿ ಜಾತ್ರೆಯಲ್ಲಿ ನಡೆಯುತ್ತದೆ.

ಈ ದೇವರನ್ನು ಕಂಚೀ ವರದ ವಿಷ್ಣುವಿನ ಅವತಾರವೆಂದೂ ಪ್ರಸಿದ್ಧಿ ಪಡೆದಿರುವ ದೇವಾಲಯದಲ್ಲಿ ಮೊದಲು ವಜ್ರ ವೈಢೂರ್ಯಗಳನ್ನು ದೇವರ ಮೇಲೆ ಎರಚಿ ತಮ್ಮ ಭಕ್ತಿಯನ್ನ ಸಮರ್ಪಿಸಿಕೊಳ್ಳುತ್ತಿದ್ದರು ಎಂಬ ಇತಿಹಾಸವನ್ನು ಹೊಂದಿದೆ.  ಈ ಹಿನ್ನೆಲೆಯಲ್ಲಿ ಈಗಲೂ ಹರಕೆ ಮಾಡಿಕೊಂಡು ಹಣವನ್ನು ಎಸೆಯುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಉತ್ತರ ಮಳೆಯ ಅಂಬಿನ (ಆರಂಭದ) ಮೊದಲ ಜಾತ್ರೆ ಇದಾಗಿದ್ದು, ರಾಜ್ಯದಲ್ಲಿ ನಡೆಯುವ ಮೊದಲ ಜಾತ್ರೆಯನ್ನು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಜಾತ್ರೆಯಲ್ಲಿ ಭಕ್ತರು ಬಾನ ಬುತ್ತಿಯನ್ನು ತೆಗೆದುಕೊಂಡು ದಶರಥರಾಮೇಶ್ವರ ವಜ್ರಕ್ಕೆ ತೆರಳುತ್ತಾರೆ. ಅಲ್ಲಿ 16 ಸೇರು ಅಕ್ಕಿಯಿಂದ ಅನ್ನ, ಮುದ್ದೆ, ಸಾಂಬಾರ ಮಾಡಿ ಭಕ್ತರಿಗೆ ಪ್ರಸಾದವಾಗಿ ನೀಡುತ್ತಾರೆ. ಈ ಸ್ವಾಮಿಗೆ ಸಲ್ಲಿಸಲಾಗುವ ಪೂಜೆಯನ್ನು ನೋಡಲು ಹಾಗೂ ಹರಕೆಯನ್ನು ತೀರಿಸಲು ನೆರೆಯ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ.

ವಿಶೇಷ ಏನೆಂದರೆ ಭಕ್ತರು ಹೀಗೆ ಎಸೆದ ಹಣ ದೇವಾಲಯ ಸೇರುವುದಿಲ್ಲ. ಬದಲು ಪ್ರಸಾದ ರೂಪದಲ್ಲಿ ಈ ಹಣವನ್ನು ಹೆಕ್ಕಿಕೊಳ್ಳುತ್ತಾರೆ.

ದಸರಾ ಆರಂಭಕ್ಕೂ ಮುನ್ನವೇ ಇಲ್ಲಿ ಜಾತ್ರೆ ಆರಂಭವಾಗುತ್ತದೆ. ಕಂಚಿನ ವರದ ರಾಜಸ್ವಾಮಿಯನ್ನು 16 ದಿನಗಳ ಕಾಲ ಪಟ್ಟಕ್ಕೆ ಕೂರಿಸಿ, 17 ಮತ್ತು 18 ದಿನದಂದು ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಲಾಗುತ್ತದೆ. ಈ ಜಾತ್ರೆಗೆ ಆಗಮಿಸುವ ಭಕ್ತರು ಹಣವನ್ನು ತೂರಿ ತಮ್ಮ ಹರಕೆಯನ್ನು ಈಡೇರಿಕೊಳ್ಳುತ್ತಾರೆ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ದೇವಾಲಯದ ಮಹತ್ವನ್ನು ತಿಳಿಸಿದರು.

ಭಕ್ತರು ಸಂತಾನ ಭಾಗ್ಯ, ಸರ್ಕಾರಿ ಉದ್ಯೋಗ, ವಿವಾಹ ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಬೇಡಿಕೊಳ್ಳುತ್ತಾರೆ. ಬಿಕಾಂ ಓದುವಾಗ ತನಗೆ ಸರ್ಕಾರಿ ಕೆಲಸ ಸಿಗಬೇಕು ಎಂದು  ಹರಕೆ ಹೇಳಿಕೊಂಡಿದ್ದೆ. ಈಗ ನನಗೆ ಮ್ಯಾನೇಜ್‍ಮೆಂಟ್ ಡಿಪಾರ್ಟ್‍ಮೆಂಟ್‍ನಲ್ಲಿ ಕೆಲಸವೂ ಸಿಕ್ಕಿದೆ. ಆದ್ದರಿಂದ ನಾನು ನನ್ನ ಮೊದಲ ಸಂಬಳದಿಂದ ಎಂಟು ಸಾವಿರ ರೂ. ಹಣವನ್ನು ದೇವರಿಗೆ ತೂರುತ್ತಿದ್ದೇನೆ ಎಂದು ಭಕ್ತೆ ಮಮತಾ ಮಾಧ್ಯಮಗಳಿಗೆ ಹೇಳಿದರು.

ಹರಕೆಯನ್ನು ಬೇಡಿಕೊಂಡವರಿಗೆ ವರವನ್ನು ನೀಡುವ ವರದಯ್ಯನಾಗಿ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ. ಪ್ರತೀ ವರ್ಷವು ಭಕ್ತರು ತಮ್ಮ ಕಷ್ಟಗಳನ್ನು ತೀರಿಸುವ ವರದ ದಶರಥರಾಮೇಶ್ವರರಿಗೆ ತಮ್ಮ ಕಾಣಿಕೆಯನ್ನು ಸಮರ್ಪಿಸಿಕೊಳ್ಳುತ್ತಾರೆ ಎಂದು ಜಾತ್ರೆಗೆ ಆಗಮಿಸಿದ ಭಕ್ತೆ ಶಾರದಮ್ಮ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *