– ಮಸ್ತಾನ್ ದರ್ಗಾದಲ್ಲೂ ಪ್ರದಕ್ಷಿಣೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಬುಧವಾರ ತಡರಾತ್ರಿ ನಡೆದ ಸಾಂಪ್ರದಾಯಿಕ, ಪ್ರಸಿದ್ಧ ಕರಗ ಉತ್ಸವವನ್ನು (Bengaluru Karaga) ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸತತ 16ನೇ ಬಾರಿಗೆ ಅರ್ಚಕ ಎ.ಜ್ಞಾನೇಂದ್ರ ಕರಗವನ್ನು ಹೊತ್ತಿದ್ದು, ಹುಣ್ಣಿಮೆ ಬೆಳಕಲ್ಲಿ ಹೂವಿನ ಕರಗ ಕಂಗೊಳಿಸಿದೆ.
ಅರ್ಚಕ ಎ.ಜ್ಞಾನೇಂದ್ರ ಪೂರ್ವ ಪೂಜಾಕ್ರಮಗಳನ್ನು ಪೂರೈಸಿ, ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬಂದು ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿದ ಬಳಿಕ ಮಲ್ಲಿಗೆ ಹೂವಿನಿಂದ ಅಲಂಕಾರಗೊಂಡಿದ್ದ ದ್ರೌಪದಿದೇವಿ ಕರಗ ಉತ್ಸವವನ್ನು ಹೊತ್ತು ದೇವಸ್ಥಾನದಿಂದ ಹೊರಬಂದರು. ವೀರಕುಮಾರರ ಉದ್ಘೋಷ, ಭಕ್ತರ ಗೋವಿಂದ ನಾಮಸ್ಮರಣೆ, ಮಲ್ಲಿಗೆ ಹೂವಿನ ಸಮರ್ಪಣೆಯೊಂದಿಗೆ ನಗರದ ಪೇಟೆಗಳ ಮುಖ್ಯರಸ್ತೆ, ಗಲ್ಲಿಗಳಲ್ಲಿ ಮೆರವಣಿಗೆ ಸಾಗಿತು.
ಮಲ್ಲಿಗೆ ಹೂಗಳಿಂದ ಅಲಂಕೃತಗೊಂಡ ದ್ರೌಪದಮ್ಮನ ಕರಗ ಭಕ್ತಿಯ ಕೇಂದ್ರಬಿಂದುವಾಗಿದ್ದು, ಖಡ್ಗ ಹಿಡಿದ ವೀರಕುಮಾರರ ಅಬ್ಬರದ ಮಧ್ಯೆ ಕರಗ ಮೆರವಣಿಗೆ ರಾತ್ರಿಯಿಡೀ ಸಂಭ್ರಮ ಸಡಗರದಿಂದ ಸಾಗಿತು. ನಗರದ ವಿವಿಧ ಭಾಗಗಳಲ್ಲಿ ನಡೆದ ರಥಗಳ ಮೆರವಣಿಗೆಯ ವೈಭವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ದ್ರೌಪದಮ್ಮನ ಹೂವಿನ ಕರಗ 25 ಪೇಟೆಗಳಲ್ಲಿ ಸಾಗಿದ್ದು, ಮಸ್ತಾನ್ ಸಾಬ್ ದರ್ಗಾದಲ್ಲೂ ಕರಗ ಪ್ರದಕ್ಷಿಣೆ ಹಾಕಿದೆ. ಇನ್ನು ಕರಗದ ಬಗ್ಗೆ ದರ್ಗಾದ ಮುಜಾವರ್ ಪರ್ವೀಜ್ ಅಹ್ಮದ್ ಮಾತನಾಡಿ, ತಲತಲಾಂತರಗಳಿಂದ ನಡೆದು ಬಂದ ಸಂಪ್ರದಾಯವಿದು. ಧರ್ಮರಾಯಸ್ವಾಮಿಗೂ, ಮಸ್ತಾನ್ ಸಾಬ್ ಅವರಿಗೂ ತುಂಬಾ ಪ್ರೀತಿ. ಅದೇ ಕಾರಣಕ್ಕೆ ಇಲ್ಲಿಗೆ ಭೇಟಿ ನೀಡಿ ಕರಗ ಮುಂದುವರೆಯುತ್ತದೆ. ಇಲ್ಲಿ ಬಂದು ಮೂರು ಸುತ್ತಗಳನ್ನ ಹಾಕಿ ಆಚರಣೆ ಮಾಡಲಾಗುತ್ತೆ. ದೇವಾಲಯದ ಸಂಪ್ರದಾಯದಂತೆ ಮಂತ್ರಗಳನ್ನ ಹೇಳಲಾಗುತ್ತದೆ. ನಾವು ಸಹ ವಿಶೇಷವಾದ ತಯಾರಿಗಳನ್ನ ಮಾಡಿಕೊಳ್ಳುತ್ತೇವೆ. ದೇವಸ್ಥಾನದಂತೆಯೇ ಎಲ್ಲಾ ರೀತಿಯ ಅಲಂಕಾರಗಳನ್ನ ಮಾಡಿದ್ದೇವೆ. ಇದು ಐತಿಹಾಸಿಕವಾದ ಕಾರ್ಯಕ್ರಮ ಇದರಲ್ಲಿ ಭಾಗಿ ಆಗಿರೋದು ನಮಗೂ ಖುಷಿಯಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಗರುಡಾಚಾರ್, ಎನ್.ಎ. ಹ್ಯಾರಿಸ್ ಸೇರಿದಂತೆ ಹಲವರು ಕರಗದ ದರ್ಶನ ಪಡೆದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.



