SSLC ಪಾಸ್ ಮಾಡು, ಗಂಡನಿಗೆ ಬುದ್ಧಿಕೊಡು, ಪ್ರೇಮಿಯ ಜೀವನ ಹಾಳು ಮಾಡು – ಸವದತ್ತಿ ಯಲ್ಲಮ್ಮನಿಗೆ ಪತ್ರ

Public TV
2 Min Read

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ. ಇಲ್ಲಿಗೆ ನಿತ್ಯ ಲಕ್ಷಾಂತರ ಜನ ಭಕ್ತರು ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇಂತಹ ಶಕ್ತಿ ಪೀಠಕ್ಕೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಹರಕೆಯನ್ನು ಹೋರುತ್ತಾರೆ.

ಸವದತ್ತಿ ಯಲ್ಲಮ್ಮ ಜಾತ್ರೆ ವರ್ಷದ 6 ತಿಂಗಳ ಕಾಲ ಇಲ್ಲಿ ನಿತ್ಯವೂ ಜಾತ್ರೆ ನಡೆಯುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಇಲ್ಲಿಗೆ ಬರುವ ಭಕ್ತಾಧಿಗಳು ತಮ್ಮ ಇಷ್ಟಾರ್ಥಗಳನ್ನು ಪತ್ರದಲ್ಲಿ ಬರೆದು ಹುಂಡಿಗೆ ಹಾಕುತ್ತಾರೆ. ದೇವಸ್ಥಾನದ ಹುಂಡಿಯಲ್ಲಿ ಸಿಕ್ಕ ಪತ್ರಗಳಲ್ಲಿ ಭಕ್ತರು ವಿಭಿನ್ನ ಹರಕೆಯನ್ನು ಹೊತ್ತಿಕೊಂಡಿರುವುದು ಬಹಿರಂಗವಾಗಿದೆ.

ಕನ್ನಡ, ಇಂಗ್ಲಿಷ್, ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಭಕ್ತರು ತಮ್ಮ ವೈಯಕ್ತಿಕ ಹರಕೆಗಳನ್ನು ಬರೆದು ದೇವಿಯ ಮುಂದಿಟ್ಟಿದ್ದಾರೆ. ಅಮ್ಮಾ, ಯಲ್ಲಮ್ಮ ನನಗೆ ನೀನು ಸಹಾಯ ಮಾಡಿದ್ದೀಯಾ. ಆದರೆ ನನಗೆ ಕಷ್ಟ ಬಂದಾಗ ಮಾತ್ರ ನೀನು ನೆನಪಾಗ್ತೀಯ ಕ್ಷಮಿಸು. ನನಗೆ ಸಹಾಯ ಮಾಡು. ನನ್ನ ಗಂಡ ಸಿಕ್ಕ ಸಿಕ್ಕವರಿಗೆಲ್ಲಾ ಹಣ ಕೊಡುತ್ತಾನೆ. ಅವನಿಗೆ ಬುದ್ಧಿ ಕೊಡು. ಹಾಗೆಯೇ ನನ್ನ ತಂಗಿಯರು ತಪ್ಪು ಮಾಡಿದರೆ ಅವರನ್ನ ಕ್ಷಮಿಸಿಬಿಡು. ನಂಜನಗೂಡು ನಲ್ಲಿ ಇರುವ ಆಸ್ತಿ ನನಗೆ ಸಿಗೋ ಹಾಗೆ ಮಾಡು ಎಂದು ಒಬ್ಬರು ಬರೆದಿದ್ದಾರೆ.

ಕೈ ಮುಗಿವೆ ತಾಯಿ, ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿಸು ಎಂದು ಕೇಳಿದ್ದಾರೆ. ಮತ್ತೊಂದು ಪತ್ರದಲ್ಲಿ ವ್ಯಕ್ತಿ ಸರ್ವನಾಶ ಮಾಡುವಂತೆ ಮಹಿಳೆಯೊಬ್ಬರು ದೇವಿಗೆ ಹರಕೆ ಮಾಡಿದ್ದಾರೆ. ಆತನ ಉದ್ಯೋಗ ಹಾಳು ಮಾಡು. ಆತನ ಆಯುಷ ಕಿತ್ಕೋ. ಈ ಹರಕೆ ಈಡೇರಿದ್ರೆ ನನಗೆ ತಿಂಗಳಿಗೆ ಬರೋ ಆದಾಯದಲ್ಲಿ ಅರ್ಧದಷ್ಟು ನಿನ್ನ ಹುಂಡಿಗೆ ಹಾಕುತ್ತೇನೆ ಎಂದು ಬರೆದಿದ್ದಾರೆ.

ಈ ಹಿಂದೆ ಬೆಂಗಳೂರಿನ ಬನಶಂಕರಿಯಮ್ಮನಿಗೂ ಇದೆ ರೀತಿ ಚಿತ್ರವಿಚಿತ್ರ ಬೇಡಿಕೆಗಳನ್ನು ಭಕ್ತರು ದೇವಿಯ ಮುಂದಿಟ್ಟಿದ್ದಾರೆ. ಈ ಸಲ ಬೆಳಗಾವಿಯ ಸವದತ್ತಿಯಲ್ಲಿರೋ ಯಲ್ಲಮ್ಮನ ಸರದಿ ಸವದತ್ತಿ ಯಲ್ಲಮ್ಮನಿಗೆ ಬರೆದಿದ್ದಾರೆ. ಇಲ್ಲಿಗೆ ದೂರದೂರುಗಳಿಂದ ಲಕ್ಷಾಂತರ ಜನ ಬಂದು ತಮ್ಮ ಇಷ್ಟಾರ್ಥಗಳನ್ನು ಪತ್ರದಲ್ಲಿ ಬರೆದು ಹುಂಡಿಗೆ ಹಾಕುವುದು ಇಲ್ಲಿನ ವಿಶೇಷ. ಹೀಗೆ ಹರಕೆ ರೂಪದಲ್ಲಿ ಹಾಕಿದ ನೂರಾರು ಪತ್ರಗಳು ಹುಂಡಿಯ ಹಣ ಎಣಿಕೆ ಮಾಡುವಾಗ ಸಿಕ್ಕಿದ್ದು, ಭಕ್ತರ ಈ ಬೇಡಿಕೆ ಪತ್ರಗಳನ್ನ ಕಂಡ ಹುಂಡಿ ಎಣಿಕೆ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *