ಭೀಮಾ ಪುಷ್ಕರದಲ್ಲಿ ಮಿಂದೆದ್ದು ಪಾವನರಾದ ಭಕ್ತರು

Public TV
2 Min Read

ರಾಯಚೂರು: ತೆಲಂಗಾಣ ಕರ್ನಾಟಕ ಗಡಿಯಲ್ಲಿ ಭೀಮಾ ಪುಷ್ಕರದ ಸಂಭ್ರಮ ಮನೆಮಾಡಿದ್ದು, 12 ವರ್ಷಕ್ಕೆ ಒಮ್ಮೆ ಬರುವ ಭೀಮಾ ಪುಷ್ಕರದಲ್ಲಿ ಪುಣ್ಯ ಸ್ನಾನ ಮಾಡಲು ಜನ ದೂರದ ಊರುಗಳಿಂದ ಬರುತ್ತಿದ್ದಾರೆ.

ಜಿಲ್ಲೆಯಲ್ಲಿ ಭೀಮಾನದಿ ಹರಿಯುವುದಿಲ್ಲವಾದರೂ ತೆಲಂಗಾಣ ಗಡಿಯಲ್ಲಿ ಭೀಮಾ-ಕೃಷ್ಣ ಸಂಗಮವಾಗುವುದರಿಂದ ಪುಷ್ಕರಕ್ಕೆ ಮಹತ್ವ ಬಂದಿದೆ. ನದಿಯಲ್ಲಿ ಮಾಡುವ ಸ್ನಾನ ಪುಣ್ಯ ಸ್ನಾನ ಅಂತಲೇ ಮೊದಲಿನಿಂದಲೂ ನಂಬಿಕೆ ಇದೆ. ಆದರೆ ಪುಷ್ಕರದ ವೇಳೆ ಆಯಾ ನದಿಯಲ್ಲಿ ಮುಕ್ಕೋಟಿ ದೇವರು ಮಿಂದೇಳುವುದರಿಂದ ಆ ಸ್ನಾನ ಪರಮ ಪವಿತ್ರ ಸ್ನಾನವೆಂದೇ ನಂಬಲಾಗುತ್ತದೆ.

ಗುರು ಯಾವ ರಾಶಿಗೆ ಪ್ರವೇಶಿಸುತ್ತಾನೆ ಎನ್ನುವುದರ ಮೇಲೆ ಒಂದೊಂದು ನದಿಯ ಪುಷ್ಕರ ನಿರ್ಧಾರವಾಗುತ್ತದೆ. ಸಿಂಹ ರಾಶಿಯಲ್ಲಿ ಗೋದಾವರಿ ನದಿಗೆ, ಕನ್ಯಾ ರಾಶಿಯಲ್ಲಿ ಕೃಷ್ಣ ನದಿಗೆ, ತುಲಾ ರಾಶಿಯಲ್ಲಿ ಕಾವೇರಿ ನದಿಗೆ ಹಾಗೂ ವೃಶ್ಚಿಕ ರಾಶಿಯಲ್ಲಿ ಭೀಮಾನದಿಗೆ ಪುಷ್ಕರ ಬರುತ್ತದೆ.

12 ವರ್ಷಗಳ ಬಳಿಕ ಭೀಮಾ ನದಿಯಲ್ಲಿ ಪುಷ್ಕರ ನಡೆಯುತ್ತಿದ್ದು, ವಿಶೇಷವಾಗಿ ಕೃಷ್ಣದೇವರಾಯ, ನಿಜಾಮಶಾಯಿ, ಆದಿಲ್‍ಶಾಯಿಗಳ ರಾಜ್ಯಗಳ ಗಡಿ ಸಂಗಮದ ಪ್ರದೇಶದಲ್ಲೆ ಈಗ 12 ದಿನ ಕಾಲ ಪುಷ್ಕರ ನಡೆಯುತ್ತಿದೆ. ಹೀಗಾಗಿ ರಾಯಚೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಭೀಮಾ ನದಿ ಪುಷ್ಕರದ ಪುಣ್ಯ ಸ್ನಾನಕ್ಕಾಗಿ ತೆಲಂಗಾಣಕ್ಕೆ ತೆರಳುತ್ತಿದ್ದಾರೆ.

ಈ ಬಗ್ಗೆ ಅರ್ಚಕರಾದ ಶೇಷಗಿರಿಯಾಚಾರ್ ಪ್ರತಿಕ್ರಿಯಿಸಿ, ಪುಷ್ಕರಕ್ಕೆ ಬರುವ ಭಕ್ತರು ಪುಣ್ಯಸ್ನಾನದ ಜೊತೆ ಪಿಂಡ ಪ್ರಧಾನವನ್ನು ಮಾಡುತ್ತಾರೆ. ಇಲ್ಲಿ ದಾನಗಳನ್ನು ಮಾಡುವ ಮೂಲಕ ತಮ್ಮ ಪಾಪಕರ್ಮಗಳನ್ನು ಕಳೆದುಕೊಳ್ಳುತ್ತಾರೆ. ಈ ಬಾರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿರುವುದರಿಂದ ಪುಷ್ಕರಕ್ಕೆ ಅನಾನುಕೂಲಗಳು ಸಹ ಆಗಿವೆ. ಆದರೂ ಸಹ ಪುಣ್ಯ ಸ್ನಾನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಭೀಮಾನದಿಗೆ ಬರುತ್ತಾರೆ ಎಂದು ತಿಳಿಸಿದರು.

ಪುಷ್ಕರದ ಕುರಿತು ಸ್ಥಳೀಯರಾದ ಚಕ್ರಪಾಣಿ ಆಚಾರ್ ಮಾತನಾಡಿ, ಕರ್ನಾಟಕದಲ್ಲೇ ಹೆಚ್ಚು ದೂರದವರೆಗೆ ಸಾಗುವ ಭೀಮಾನದಿಯು ತೆಲಂಗಾಣ ಪ್ರವೇಶಿಸಿ ಪುನಃ ಕೃಷ್ಣಾ ನದಿಯಲ್ಲಿ ಸಂಗಮವಾಗುತ್ತದೆ. ತೆಲಂಗಾಣದ ಮೆಹಬೂಬನಗರ ಜಿಲ್ಲೆಯ ಕೃಷ್ಣ ಮಂಡಲದಲ್ಲಿ ಬರುವ ಕುಸಮತಿ ಹಾಗೂ ತಂಗಡಗಿಯಲ್ಲಿ ಪುಷ್ಕರಕ್ಕೆ ಸಕಲ ವ್ಯವಸ್ಥೆಗಳನ್ನ ಮಾಡಲಾಗಿದೆ. ಗುರು ರಾಘವೇಂದ್ರ ಸ್ವಾಮಿಗಳ ಪ್ರೀತಿಗೆ ಪಾತ್ರರಾದ ಮಹಾಯತಿ ಕೃಷ್ಣದ್ವೈಪಾದರು ಐಕ್ಯವಾದ ಸ್ಥಳವು ಇಲ್ಲೇ ಇರುವುದರಿಂದ ಪುಷ್ಕರಕ್ಕೆ ಇನ್ನಷ್ಟು ಮಹತ್ವ ಬಂದಿದೆ ಎಂದು ವಿವರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *