ಶಾ ಒಪ್ಪುತ್ತಿಲ್ಲ, ಶಿವಸೇನೆ ಹಠ ಬಿಡ್ತಿಲ್ಲ-ಏಕಾಂಗಿಯಾದ ದೇವೇಂದ್ರ ಫಡ್ನವೀಸ್

Public TV
2 Min Read

ಮುಂಬೈ: ನಾನೇ ಮುಂದಿನ ಐದು ವರ್ಷದ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡಿರುವ ಹಂಗಾಮಿ ಸಿಎಂ ದೇವೇಂದ್ರ ಫಡ್ನವೀಸ್ ಏಕಾಂಗಿಯಾಗಿದ್ದಾರೆ. ಕೇಂದ್ರದಿಂದ ಯಾವುದೇ ಸೂಚನೆ ಸಿಗುತ್ತಿಲ್ಲ. ಶಿವಸೇನೆ ತನ್ನ ಹಠವನ್ನು ಬಿಡುತ್ತಿಲ್ಲ. ಇಬ್ಬರ ಹಗ್ಗಜಗ್ಗದಾಟದಲ್ಲಿ ದೇವೇಂದ್ರ ಫಡ್ನವೀಸ್ ಏಕಾಂಗಿಯಾಗಿದ್ದಾರೆ ಎಂಬ ಚರ್ಚೆಗಳು ಮಹಾರಾಷ್ಟ್ರ  ರಾಜಕಾರಣದಲ್ಲಿ ಕೇಳಿ ಬರುತ್ತಿವೆ.

ಚುನಾವಣೆ ಬಳಿಕ ನಾನೇ ಎರಡನೇ ಬಾರಿ ಸಿಎಂ ಆಗಲಿದ್ದೇನೆ. ಮುಂದಿನ ಐದು ವರ್ಷ ಸಹ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತೇನೆ. ಮೈತ್ರಿ ಮಾಡಿಕೊಳ್ಳುವಾಗ ಶಿವಸೇನೆ ಎಲ್ಲಿಯೂ ಸಿಎಂ ಸ್ಥಾನದ ಬಗ್ಗೆ ಮಾತನಾಡಿರಲಿಲ್ಲ. ಅಲ್ಲದೇ 50:50 ಫಾರ್ಮುಲಾ ಸಹ ಮುಂದಿಟ್ಟಿರಲಿಲ್ಲ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದರು. ಇದನ್ನೂ ಓದಿ: ನಮ್ಮ ಬಳಿ ಮ್ಯಾಜಿಕ್ ನಂಬರ್ ಇದೆ: ಶಿವಸೇನೆ

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಮೈತ್ರಿ ಮಾಡಿಕೊಳ್ಳುವಾಗ 50:50 ಫಾರ್ಮುಲಾದಂತೆ ಎರಡೂವರೆ ವರ್ಷದಂತೆ ಎರಡು ಪಕ್ಷದ ನಾಯಕರು ಸಿಎಂ ಆಗಬೇಕೆಂದು ಒಪ್ಪಿಕೊಳ್ಳಲಾಗಿತ್ತು ಎಂದು ಹೇಳುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸರ್ಕಾರ ರಚನೆಯ ಬಗ್ಗೆ ಯಾವ ಸಂದೇಶವನ್ನು ದೇವೇಂದ್ರ ಫಡ್ನವೀಸ್ ಅವರಿಗೆ ಕಳುಹಿಸಿಲ್ಲ ಎನ್ನಲಾಗಿದೆ. ಇತ್ತ ಶಿವಸೇನೆ ನಿಮ್ಮ ನಿರ್ಧಾರವನ್ನು ತಿಳಿಸಬೇಕೆಂದು ದೇವೇಂದ್ರ ಫಡ್ನವೀಸ್ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸಿಎಂ ಸ್ಥಾನ ನಮಗೆ ಬರೆದಿಟ್ಟುಕೊಳ್ಳಿ – ಬಿಜೆಪಿ ಇಲ್ಲದೇ ಸರ್ಕಾರ ರಚನೆಗೆ ಶಿವಸೇನೆ ಪ್ಲಾನ್

ಈ ನಡುವೆ ಬಿಜೆಪಿಯ ಮುಖಂಡ ಸುಧೀರ್ ಮುಂಗಂಟಿವೀರ್, ನವೆಂಬರ್ 8ರೊಳಗೆ ಸರ್ಕಾರ ರಚನೆ ಆಗದಿದ್ದರೆ, ಮಹಾರಾಷ್ಟ್ರದಲ್ಲಿ ರಾಷ್ಟ್ಟಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದರು. ಬಿಜೆಪಿಯ ಈ ಹೇಳಿಕೆಗೆ ಕೆಂಡಾಮಂಡಲಗೊಂಡ ಶಿವಸೇನೆ ತನ್ನ ಸಾಮ್ನಾ ಪತ್ರಿಕೆಯಲ್ಲಿ, ರಾಷ್ಟ್ರಪತಿಗಳು ನಿಮ್ಮ ಜೇಬಿನಲ್ಲಿದ್ದರಾ? ಶೀರ್ಷಿಕೆ ಅಡಿಯಲ್ಲಿ ಸುದ್ದಿಯನ್ನು ಪ್ರಕಟಿಸಿ ತಿರುಗೇಟು ನೀಡಿತ್ತು. ಇದನ್ನೂ ಓದಿ: ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರಾ? ಬಿಜೆಪಿ ಹೇಳಿಕೆಗೆ ಶಿವಸೇನೆ ಕೆಂಡಾಮಂಡಲ

ಶಿವಸೇನೆ ಮಾತ್ರ ಎನ್‌ಸಿಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸುತ್ತಾ ಬಂದಿದೆ. ಎನ್‌ಸಿಪಿಯ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದ ಶಿವಸೇನೆಯ ಮುಖಂಡ ಸಂಜಯ್ ರಾವತ್, ಬಿಜೆಪಿಯೇತರ ಸರ್ಕಾರ ರಚನೆ ಬಗ್ಗೆ ಮಾತನಾಡಿದ್ದರು. ಹೊಸ ಸಮೀಕರಣ (ಶಿವಸೇನೆ+ಕಾಂಗ್ರೆಸ್+ಎನ್‌ಸಿಪಿ=ಸರ್ಕಾರ) ಒಪ್ಪಿಕೊಂಡರೆ ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸಬಹುದು ಎಂದು ಸಂಜಯ್ ರಾವತ್ ತಿಳಿಸಿದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತ್ತು. ಇದನ್ನೂ ಓದಿ: 50-50 ಫಾರ್ಮುಲಾಗೆ ಶಿವಸೇನೆ ಆಗ್ರಹ- ಜೆಡಿಎಸ್ ಅಸ್ತ್ರ ಪ್ರಯೋಗಿಸಿದ ಉದ್ಧವ್ ಠಾಕ್ರೆ

ಎನ್‌ಸಿಪಿ ಬಿಜೆಪಿ ಜೊತೆ ಹೋಗಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಶರದ್ ಪವಾರ್, ಜನಾದೇಶದ ಪ್ರಕಾರ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೇವೆ. ಆದರೆ ಯಾರೊಂದಿಗೆ ನಾವು ಮೈತ್ರಿ ಮಾಡಿಕೊಳ್ಳಲ್ಲ ಎಂದು ಹೇಳಿದ್ದರು. ಇಂದು ಸಂಜಯ್ ರಾವತ್, ಈಗಾಗಲೇ ನಮಗೆ 170 ಶಾಸಕರ ಬೆಂಬಲ ಸಿಕ್ಕಿದೆ. ಶೀಘ್ರದಲ್ಲಿಯೇ ಈ ಸಂಖ್ಯೆ 175 ಆಗಲಿದೆ ಎಂದಿದ್ದಾರೆ.ಇದನ್ನೂ ಓದಿ: ಇಲ್ಲಿ ಯಾರು ಜೈಲಿನಲ್ಲಿರುವ ಪುತ್ರ ದುಷ್ಯಂತ್ ಚೌಟಾಲಾ ಇಲ್ಲ: ಶಿವಸೇನೆ

Share This Article
Leave a Comment

Leave a Reply

Your email address will not be published. Required fields are marked *