ಲೋಕಸಭೆಯಲ್ಲಿ ಮೋದಿ ಸೋಲಿಸಲು ತನ್ನ ರಣತಂತ್ರವನ್ನು ಬಿಚ್ಚಿಟ್ಟ ದೇವೇಗೌಡ

Public TV
2 Min Read

ನವದೆಹಲಿ: ರಾಜ್ಯದಲ್ಲಿ ಬಿಜೆಪಿಯನ್ನು ದೂರವಿಟ್ಟು ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರವಹಿಸಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು ಲೋಕಸಭೆಯಲ್ಲೂ ಮೋದಿಯನ್ನು ಸೋಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ.

ಬಿಜೆಪಿಯನ್ನು ಸೋಲಿಸಲೇಬೇಕೆಂಬ ಹಠದಲ್ಲಿರುವ ಕಾಂಗ್ರೆಸ್ ನಿರ್ಧಾರಕ್ಕೆ ಬೆಂಬಲವಾಗಿರುವ ದೇವೇಗೌಡರು ಈಗ ರಾಷ್ಟ್ರ ರಾಜಕಾರಣದಲ್ಲಿ ಮುಂದೆ ನಡೆಯಬಹುದಾದ ಮೈತ್ರಿಯ ಬಗ್ಗೆ ಸುಳಿವು ನೀಡಿದ್ದಾರೆ. ದೆಹಲಿಯಲ್ಲಿ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ವೇಳೆ ಚುನಾವಣೆ ಯಾವ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಕಿರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಸಹಭಾಗಿತ್ವದಲ್ಲಿಯೇ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ. ನಮ್ಮ ಮೈತ್ರಿಯಲ್ಲಿ ಬಿಎಸ್‍ಪಿ ಕೂಡಾ ಇರಲಿದೆ. ಹೀಗಾಗಿ ಜೆಡಿಎಸ್ ಪಾಲಿನ ಸೀಟುಗಳಲ್ಲಿ ಒಂದು ಸ್ಥಾನವನ್ನು ಬಿಎಸ್‍ಪಿಗೆ ಬಿಟ್ಟುಕೊಡುತ್ತೇವೆ. ಅಷ್ಟೇ ಅಲ್ಲದೇ ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ತನ್ನ ಕೆಲವು ಕ್ಷೇತ್ರಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಲಿದ್ದು, ಈ ಕುರಿತು ಮೈತ್ರಿ ಪಕ್ಷಗಳಲ್ಲಿ ಚಿಂತನೆ ನಡೆದಿವೆ. ಲೋಕಸಭೆ ಚುನಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚೆ ಮಾಡಬೇಕಾಗುತ್ತದೆ ಎಂದು ತಮ್ಮ ತಯಾರಿಯನ್ನು ದೇವೇಗೌಡ ಅವರು ತೆರೆದಿಟ್ಟರು.

ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಹಾಗೂ ಜನತಾ ದಳ ಯುನೈಟೆಡ್ (ಜೆಡಿಯು) ನಾಯಕ ನಿತೀಶ್ ಕುಮಾರ್ ಒಂದಾಗಲಿದ್ದಾರೆ. ಮೈತ್ರಿ ಕೂಟದಲ್ಲಿ ಬಿಎಸ್‍ಪಿಗೂ ಜವಾಬ್ದಾರಿಯುತ ಸ್ಥಾನ ಕೊಡಲಾಗಿದ್ದು, ಕರ್ನಾಟಕದಲ್ಲಿ ಬಿಎಸ್‍ಪಿ ಸ್ಪರ್ಧಿಸುವ ಆಸಕ್ತಿ ತೋರಿದರೆ ಜೆಡಿಎಸ್ ಕೋಟಾದಲ್ಲಿ ಕೆಲವು ಸ್ಥಾನ ನೀಡುವ ಯೋಜನೆ ಇದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ ಎಷ್ಟು ಸ್ಥಾನ ಅಂತಾ ಇನ್ನು ಚರ್ಚೆಯಾಗಿಲ್ಲ. ನಾನು ಮಂಡ್ಯದಿಂದ ಸ್ವರ್ಧಿಸುವ ಬಗ್ಗೆಯೂ ಚರ್ಚೆಯಾಗಿದೆ. ರಾಜ್ಯದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳು ಬಗೆಹರಿದ ಮೇಲೆ ಮಾತುಕತೆ ನಡೆಸಲಾಗುತ್ತೆ ಎಂದು ಎಂದು ತಮ್ಮ ಕಾರ್ಯತಂತ್ರದ ಬಗ್ಗೆ ವಿವರ ನೀಡಿದರು.

ಲೋಕಸಭೆ ಚುನಾವಣೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಭಾರೀ ಸಿದ್ಧತೆ ನಡೆಸುತ್ತಿದೆ. ಆದರೆ ಎನ್‍ಡಿಎ ಪರ್ಯಾಯ ಪಕ್ಷಗಳು ಒಡೆದು ಹೋಗಿವೆ ಎಂದು ಅರ್ಥೈಸಿಕೊಳ್ಳುವ ಅವಶ್ಯಕತೆ ಇಲ್ಲ. ಸಣ್ಣ ರಾಜ್ಯಗಳಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ನಡೆಸುವ ತಂತ್ರವನ್ನು ಬಿಜೆಪಿ ಹೂಡುತ್ತಿದೆ. ಈಗಾಗಲೇ ಪ್ರತಿಯೊಂದು ರಾಜ್ಯಕ್ಕೂ ಚುನಾವಣೆಯ ಸೂಚನೆಯನ್ನು ಬಿಜೆಪಿ ನೀಡುತ್ತಿದೆ. ಹೀಗಾಗಿ ಮುಂಗಾರು ಅಧಿವೇಶನವೇ ಕೊನೆಯ ಅಧಿವೇಶನ ಆದರೂ ಅಚ್ಚರಿ ಇಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ನಾನು ಎನ್‍ಡಿಎ ಹೊರತಾದ ಪಕ್ಷಗಳ ನಾಯಕರನ್ನು ಭೇಟಿ ಮಾಡಲಿದ್ದೇನೆ ಎಂದು ಅವರು ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಹೀಗಾಗಿ ಅವರ ಮಾತುಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಮಾತುಕತೆ ಆಗಿರುವುದು ಕಾಂಗ್ರೆಸ್-ಜೆಡಿಎಸ್ ನಡುವೆ. ಒಪ್ಪಂದ ಪ್ರಕಾರವೇ ಸರ್ಕಾರ ನಡೆಯಲಿದ್ದು, ಈ ಬಗ್ಗೆ ರಾಹುಲ್ ಗಾಂಧಿ- ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.

ಸಿದ್ದರಾಮಯ್ಯನವರನ್ನು ಕಡೆಗಣಿಸಿದರೆ ಸರ್ಕಾರ ಉಳಿಯುತ್ತಾ ಎಂದು ಪ್ರಶ್ನಿಸಿದ್ದ ಬಸವ ಕಲ್ಯಾಣ ಶಾಸಕ ನಾರಾಯಣ ರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾರಾಯಣ ರಾವ್ ನನ್ನ ಸ್ನೇಹಿತ. ಹೀಗಾಗಿ ಮಾಧ್ಯಮದವರು ಆತಂಕ ಪಡುವ ಅವಶ್ಯಕತೆ ಇಲ್ಲ. ಸರ್ಕಾರ ಬೀಳಲ್ಲ ಸುಭದ್ರವಾಗಿರುತ್ತದೆ ಎಂದರು.

ಪಕ್ಷದಲ್ಲಿ ಕೆಲವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸೇತರ ಮೈತ್ರಿ ಬಗ್ಗೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ಸೇತರ ಮೈತ್ರಿ ಬಗ್ಗೆ ಯೋಚನೆ ಇಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *