ರಕ್ತಮಯವಾಯ್ತು ತುರ್ತು ನಿಗಾ ಘಟಕ, ರಾತ್ರಿಯಿಡಿ ಮೃತವ್ಯಕ್ತಿಗಳ ಮೊಬೈಲ್‍ಗಳಿಗೆ ನಿರಂತರ ಕರೆ

Public TV
2 Min Read

ಪಂಚಕುಲಾ: ಶುಕ್ರವಾರ ರಾತ್ರಿಯಿಡಿ ಮೊಬೈಲ್‍ಗಳ ರಿಂಗಣ. ಮೃತ ವ್ಯಕ್ತಿಗಳಿಗೆ ಬರುತ್ತಿರುವ ಮೊಬೈಲ್ ಕರೆಗಳಿಗೆ ಹೇಗೆ ಉತ್ತರಿಸಬೇಕು ಎಂದು ತಿಳಿಯದ ವೈದ್ಯರು. ತುರ್ತು ನಿಗಾ ಘಟಕದಲ್ಲಿ ಎಲ್ಲಿ ನೋಡಿದರಲ್ಲಿ ಕೆಂಪು ಕೆಂಪು ರಕ್ತ. ಸ್ಟ್ರೇಚರ್‍ನಲ್ಲಿ ನರಳಾಡುತ್ತಿರುವ ರೋಗಿಗಳು.

ಇದು ಹರ್ಯಾಣದ ಪಂಚಕುಲಾ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಕಂಡುಬಂದ ದೃಶ್ಯ. ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಮೇಲಿನ ಅತ್ಯಾಚಾರ ಆರೋಪ ಸಾಬೀತಾದ ಬಳಿನ ನಡೆದ ಘರ್ಷಣೆಯಲ್ಲಿ ಪಂಚಕುಲದಲ್ಲಿ ಮೂವತ್ತಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಬಾಬಾನ ಭಕ್ತರ ಮೃತದೇಹಗಳನ್ನು ಪಂಚಕುಲದ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಈ ವ್ಯಕ್ತಿಗಳಿಗೆ ರಾತ್ರಿಯಿಡಿ ಕರೆ ಬರುತಿತ್ತು ಎಂದು ಆಸ್ಪತ್ರೆಯ ಸಿಬ್ಬಂದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘರ್ಷಣೆಯಲ್ಲಿ ಮೃತಪಟ್ಟ 17 ಮಂದಿ ಮೃತದೇಹಗಳನ್ನು ಪಂಚಕುಲಾ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಈ ಮೃತದೇಹಗಳು ಯಾರದ್ದು ಎನ್ನುವುದು ಇನ್ನೂ ತಿಳಿದಿಲ್ಲ. ಆದರೆ ಅವರ ಕಿಸೆಯಲ್ಲಿದ್ದ ಮೊಬೈಲ್ ಗಳಿಗೆ ನಿರಂತರ ಕರೆಗಳು ಬರುತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಕರೆ ಬರುತ್ತಿದ್ದರೂ ನಾವು ಸ್ವೀಕರಿಸಲಿಲ್ಲ. ಒಂದು ವೇಳೆ ಮಾಹಿತಿ ನೀಡಿದರೆ ರಾತ್ರಿಯೇ ಮೃತಪಟ್ಟವರ ಸಂಬಂಧಿಕರು ಆಸ್ಪತ್ರೆಗೆ ಬರುವ ಸಾಧ್ಯತೆ ಇತ್ತು, ಪಂಚಕುಲಾದಲ್ಲಿ ನಿಷೇಧಾಜ್ಞೆ ಜಾರಿಯಾದ ಹಿನ್ನೆಲೆಯಲ್ಲಿ ನಾವು ಫೋನ್ ಕರೆಗಳನ್ನು ಸ್ವೀಕರಿಸಿಲಿಲ್ಲ. ಶನಿವಾರ ಬೆಳಗ್ಗೆ ಕರೆಗಳನ್ನು ಸ್ವೀಕರಿಸಿ ಮಾಹಿತಿ ನೀಡುತ್ತೇವೆ ಎಂದು ವೈದ್ಯರು ತಿಳಿಸಿದರು.

ಮೃತಪಟ್ಟ 17 ಮಂದಿಯ ದೇಹದಲ್ಲಿ ಬುಲೆಟ್ ಹೊಕ್ಕಿದ್ದು, ಗಾಯಗಳಾಗಿವೆ. ಕೆಲವು ಮಂದಿಗೆ ಕಲ್ಲೇಟು ಬದ್ದಿದೆ. ಮೃತಪಟ್ಟವರ ದೇಹಗಳಲ್ಲಿ ಯಾವುದೇ ಗುರುತು ಪತ್ರಗಳಿಲ್ಲ. ಗ್ರಾಮಗಳಿಂದ ಬಂದಿರುವ ವ್ಯಕ್ತಿಗಳಾಗಿದ್ದು, ಕುರ್ತಾ ಮತ್ತು ಪೈಜಾಮ ಧರಿಸಿದ್ದಾರೆ. ದೇಹವನ್ನು ಗುರುತಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ಮುಂದಾಗಿದ್ದಾರೆ.

ತರ್ತು ನಿಗಾ ಘಟಕದಲ್ಲಿ ಭಯಾನಕ ಸ್ಥಿತಿ ನಿರ್ಮಾಣವಾಗಿತ್ತು. 100ಕ್ಕೂ ಹೆಚ್ಚು ಮಂದಿ ಸ್ಟ್ರೆಚರ್ ನಲ್ಲಿ ಮಲಗಿದ್ದರೆ, ಅದರಲ್ಲಿ ಹಲವು ಮಂದಿ ಮೃತಪಟ್ಟಿದ್ದರು. ತುರ್ತು ನಿಗಾ ಮಳಿಗೆಯಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಮುಂದಿನ ಕೆಲ ದಿನಗಳ ವರೆಗೆ ಎಲ್ಲ ವೈದ್ಯರ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

ಕಲ್ಲು ತೂರಾಟದಿಂದಾಗಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದು, ಕೆಲ ಐಪಿಎಸ್ ಅಧಿಕಾರಿಗಳು ಸಹ ದಾಖಲಾಗಿದ್ದಾರೆ. ದಾಖಲಾದವರ ಪೈಕಿ 55ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರೆಲ್ಲರನ್ನು ಚಂಡೀಗಢದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿವರೆಗೂ ಹೊತ್ತಿ ಉರಿದ ಹರ್ಯಾಣದಲ್ಲಿ ಸದ್ಯ ಹಿಂಸಾಚಾರ ನಿಂತಿದೆ. ಆದ್ರೆ ಬೂದಿ ಮುಚ್ಚಿದ ಕೆಂಡದಂತಿದೆ ಪರಿಸ್ಥಿತಿ. ಹೀಗಾಗಿಯೇ ಸಿಎಂ ಖಟ್ಟರ್ ಸರ್ಕಾರ ಶಾಂತಿ ಭದ್ರತೆಗೆ ಕೇಂದ್ರದ ಮೊರೆ ಹೋಗಿದೆ. ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದ್ದು, 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *