ಉಪನಿರ್ದೇಶಕಿ ಹತ್ಯೆ ಪ್ರಕರಣ- ವಿಚ್ಛೇದನ ಪಡೆದಿದ್ರಿಂದ ಬೆಂಗಳೂರಲ್ಲಿ ಒಂಟಿಯಾಗಿದ್ದರು ಪ್ರತಿಮಾ

Public TV
1 Min Read

ಶಿವಮೊಗ್ಗ: ಬೆಂಗಳೂರಿನಲ್ಲಿ (Benagluru) ಹತ್ಯೆಯಾಗಿರುವ ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ (Deputy Director) ಪ್ರತಿಮಾ ಅವರು ತಮ್ಮ ಪತಿಯೊಂದಿಗೆ ವಿಚ್ಛೇದನ ಪಡೆದಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ಒಂಟಿಯಾಗಿ ವಾಸವಿದ್ದರು. ಆದರೆ ಅಧಿಕಾರಿಯ ಹತ್ಯೆಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ.

ತೀರ್ಥಹಳ್ಳಿ ತಾಲೂಕಿನ ಕೊಂಡ್ಲೂರು ಗ್ರಾಮದ ಸುಬ್ಬಣ್ಣ ಎಂಬವರ ಪುತ್ರಿ ಪ್ರತಿಮಾ, ತೀರ್ಥಹಳ್ಳಿಯಲ್ಲಿ ವ್ಯಾಸಂಗ ನಡೆಸಿದ್ದರು. ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ (FDA) ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರ್ಪಡೆಯಾಗಿದ್ದರು. ನಂತರ ಅದೇ ಇಲಾಖೆಯಲ್ಲಿ ಉಪ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪ್ರತಿಮಾ ತೀರ್ಥಹಳ್ಳಿ ಮೂಲದ ಸತ್ಯನಾರಾಯಣ ಎಂಬುವರ ಜೊತೆ ವಿವಾಹವಾಗಿದ್ದರು. ಈ ದಂಪತಿಗೆ ಓರ್ವ ಪುತ್ರ ಸಹ ಇದ್ದ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ಸಂಸಾರದಲ್ಲಿ ಬರುಬರುತ್ತಾ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಾಗಿ ಈ ದಂಪತಿ ವಿಚ್ಛೇದನ ಪಡೆದಿತ್ತು. ವಿಚ್ಛೇದನದ ಬಳಿಕ ಪುತ್ರ ಪತಿಯ ಜೊತೆಯಲ್ಲೇ ವಾಸವಾಗಿದ್ದ. ಇದನ್ನೂ ಓದಿ: ಸರ್ಕಾರದ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇ ತಪ್ಪಾ?: ಕೊಲೆಯಾದ ಪ್ರತಿಮಾ ಸಹೋದರನ ಗೋಳಾಟ

ಗಂಡ-ಹೆಂಡತಿ ವಿಚ್ಛೇದನ ಪಡೆದಿದ್ದರಿಂದ ಪ್ರತಿಮಾ ಬೆಂಗಳೂರಿನಲ್ಲಿ ಒಂಟಿಯಾಗಿ ವಾಸವಾಗಿದ್ದರು. ತೀರ್ಥಹಳ್ಳಿಗೆ ಆಗಾಗ ಭೇಟಿ ನೀಡಿ ಪುತ್ರನನ್ನು ನೋಡಿಕೊಂಡು ಹೋಗುತ್ತಿದ್ದರು. ಅಲ್ಲದೇ ಪ್ರತಿಮಾ ಪತಿ ಸತ್ಯನಾರಾಯಣ ತೀರ್ಥಹಳ್ಳಿಯಲ್ಲಿ ಹೊಸ ಮನೆ ಕಟ್ಟಿಸಿದ್ದು, ನೂತನ ಮನೆಯ ಗೃಹ ಪ್ರವೇಶ ಸಮಾರಂಭ ಕಳೆದ ವಾರ ನಡೆದಿತ್ತು. ಈ ಗೃಹ ಪ್ರವೇಶ ಸಮಾರಂಭದಲ್ಲಿ ಪ್ರತಿಮಾ ಭಾಗವಹಿಸಿದ್ದರು.

ವಿಚ್ಛೇದನ ಪಡೆದಿದ್ದರೂ ಮಗನ ನೋಡುವ ಸಲುವಾಗಿ ಆಗಾಗೆ ಪತಿಯ ಮನೆ ಬಳಿ ಹೋಗುತ್ತಿದ್ದರು. ಆದರೆ ಶನಿವಾರ ರಾತ್ರಿ ನಡೆದಿರುವ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಮಾ ಕುಟುಂಬ ಆಗ್ರಹಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಾಕು ಇರಿದು ಉಪನಿರ್ದೇಶಕಿಯ ಬರ್ಬರ ಹತ್ಯೆ

Share This Article