ಕಾಡಿನಲ್ಲಿ ನಾನು ಒಬ್ಬಳೇ ಇದ್ದೇನೆ, ಏನಾದ್ರೂ ಆದ್ರೆ ಮ್ಯಾನೇಜರೇ ಕಾರಣ- ಲೇಡಿ ಕಂಡಕ್ಟರ್ ನೋವಿನ ಮಾತು ವೈರಲ್

Public TV
1 Min Read

ಬೆಂಗಳೂರು: ಹಳಿಯಾಳ ಘಟಕಕ್ಕೆ ಸೇರಿದ ಬಸ್ ನಿರ್ವಾಹಕಿ ಮೊಬೈಲಿನಲ್ಲಿ ತನ್ನ ಸುರಕ್ಷತೆಗೆ ಸಂಬಂಧಪಟ್ಟಂತೆ ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗಿದೆ. ಜೊತೆಗೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಮಹಿಳಾ ಸಿಬ್ಬಂದಿಗೆ ಸುರಕ್ಷತೆ ಇಲ್ವಾ ಎನ್ನುವ ಪ್ರಶ್ನೆ ಮೂಡಿದೆ.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಹಳಿಯಾಳ ಘಟಕಕ್ಕೆ ಸೇರಿದ ಕೆಎ 25 ಎಫ್ 3421 ಬಸ್ ಮಂಗಳವಾರ ಬೆಳಗ್ಗೆ ಕಾರವಾರ ಕಡೆಗೆ ಹೊರಟಿತ್ತು. ಬೆಳಗ್ಗೆ 8.30ರ ವೇಳೆ ಯಲ್ಲಾಪುರ ಬಳಿಯ ನಿರ್ಜನ ಪ್ರದೇಶದಲ್ಲಿ ಬಸ್ಸಿನ ಮುಂದಿನ ಟೈರ್ ಪಂಚರ್ ಆಗಿತ್ತು. ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ಬಸ್ಸಿಗೆ ಹತ್ತಿಸಲಾಗಿದೆ.

ಬಸ್ಸಿನಲ್ಲಿ ಸ್ಟೆಪ್ನಿ ಇಲ್ಲದ ಕಾರಣ ಕೂಡಲೇ ನಿರ್ವಾಹಕಿ ಡಿಪೋ ಮ್ಯಾನೇಜರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುವ ಮತ್ತೊಂದು ಬಸ್ಸಿನಲ್ಲಿ ಮ್ಯಾನೇಜರ್ ಸ್ಟೆಪ್ನಿ ಕಳುಹಿಸಿದ್ದಾರೆ. ಆದರೆ ಸ್ಟೆಪ್ನಿ ಚೇಂಜ್ ಮಾಡಲು ಬೇಕಾದ ಟೂಲ್ಸ್ ಬಸ್ಸಿನಲ್ಲಿದ್ದರು, ಟೂಲ್ ಬಾಕ್ಸ್ ಓಪನ್ ಆಗುತ್ತಿರಲಿಲ್ಲ. ಹಾಗಾಗಿ ನಿರ್ವಾಹಕಿ ಮತ್ತೆ ಮ್ಯಾನೇಜರ್‌ಗೆ ಕರೆ ಮಾಡಿ ಈ ವಿಷಯವನ್ನು ತಿಳಿಸುತ್ತಾರೆ. ಆಗ ಮ್ಯಾನೇಜರ್ ಸ್ಥಳೀಯ ಯಲ್ಲಾಪುರ ಡಿಪೋ ಹೋಗಿ ಟೂಲ್ಸ್ ಮತ್ತು ಮೆಕಾನಿಕ್ ಅವರನ್ನು ಕರೆ ತಂದು ರಿಪೇರಿ ಮಾಡಿಸುವಂತೆ ಚಾಲಕನಿಗೆ ಸೂಚನೆ ನೀಡಿ ನಿರ್ವಾಹಕಿಗೆ ಬಸ್ ಬಳಿಯೇ ಇರುವಂತೆ ಹೇಳಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಯಾವೊಬ್ಬ ಪ್ರಯಾಣಿಕರು ಇಲ್ಲದ ಬಸ್ಸಿನಲ್ಲಿ ಮಹಿಳಾ ಕಂಡೆಕ್ಟರ್ ಧೈರ್ಯ ಮಾಡಿ ಚಾಲಕ ಬರುವವರೆಗೂ ಬಸ್ ಬಳಿಯೇ ಇರುತ್ತಾರೆ. ಈ ವೇಳೆ ನಿರ್ಜನ ಕಾಡು ಪ್ರದೇಶದಲ್ಲಿ ತನ್ನ ಸುರಕ್ಷತೆ ಪ್ರಶ್ನಿಸಿ ನಿರ್ವಾಹಕಿ, ನನಗೆ ಇಂತಹ ನಿರ್ಜನ ಪ್ರದೇಶದಲ್ಲಿ ಏನಾದರೂ ಆದರೆ ಅದಕ್ಕೆ ಇಲ್ಲಿ ಇರಲು ಹೇಳಿದ ಹಳಿಯಾಳ ಡಿಪೋ ಮ್ಯಾನೇಜರ್ ಅವರೇ ಕಾರಣ ಎಂದು ತನ್ನ ಅಸಹಾಯಕತೆಯನ್ನು ತೋರಿದ್ದಾರೆ.

ಇದೇ ಘಟನೆಗೆ ಸಂಬಂಧಿಸಿದಂತೆ ಸಾರಿಗೆ ನೌಕರರ ಕಾರ್ಮಿಕ ಮುಖಂಡ ಯೋಗೇಶ್ ಗೌಡ ಸಾರಿಗೆ ಸಂಸ್ಥೆಯಲ್ಲಿನ ಮಹಿಳಾ ಸಿಬ್ಬಂದಿಯ ಸುರಕ್ಷತೆ ಪ್ರಶ್ನಿಸಿ ಗುರುವಾರ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *