ಕಾರ್ಮಿಕ ಇಲಾಖೆ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

Public TV
2 Min Read

ಬೆಂಗಳೂರು: ಸುರಕ್ಷತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಉತ್ತಮ ಕಾರ್ಖಾನೆಗಳು ಹಾಗೂ ಕಾರ್ಮಿಕರಿಗೆ ಕಾರ್ಮಿಕ ಮತ್ತು ಸಕ್ಕರೆ ಸಚಿವ ಎ.ಶಿವರಾಂ ಹೆಬ್ಬಾರ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ನಗರದ ಕೋರಮಂಗದಲ್ಲಿರುವ ಸೆಂಟ್ ಜಾನ್ಸ್ ಸಭಾಂಗಣದಲ್ಲಿ 49ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯ ಅಂಗವಾಗಿ ಇಂದು ಕಾರ್ಮಿಕ ಇಲಾಖೆವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವರು ಪ್ರಶಸ್ತಿ ಪುಸ್ಕೃತರಿಗೆ ಹಾಗೂ ಕಾರ್ಮಿಕರಿಗೆ ಶುಭಾಶಯ ಕೋರಿದರು.

ಸಾರ್ವಜನಿಕರು, ಕಾರ್ಮಿಕರು ಮತ್ತು ಭಾಗೀದಾರರಲ್ಲಿ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಮಿಕ ವಿಭಾಗಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಶಸ್ತಿಗಳನ್ನು ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಸಂಘಟಿತ ಅಥವಾ ಸಂಘಟಿತರಲ್ಲದ ಯಾವುದೇ ಕಾರ್ಮಿಕರಾಗಲಿ ಮಾಲೀಕರಿಲ್ಲದೆ ಅವರಿಲ್ಲ ಹಾಗೂ ಇವರಿಲ್ಲದೆ ಮಾಲೀಕರಿಲ್ಲ. ಮಾಲೀಕರು 18 ಗಂಟೆಗಳ ಕಾಲ ಕೆಲಸ ಮಾಡಿದರೆ, ಕಾರ್ಮಿಕರು 8 ಗಂಟೆ ಕೆಲಸ ಮಾಡುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರು ಗೌರವದಿಂದ ಕಾಣಬೇಕು. ಕಾರ್ಮಿಕರ ಭಾಷೆ ಆಧರಿಸಿ ಅವರನ್ನು ಅಳೆಯಬೇಡಿ. ಅವರೊಬ್ಬ ಶ್ರಮಜೀವಿ, ನಿಜವಾದ ಜವಾಬ್ದಾರಿ ಕಾರ್ಮಿಕರದ್ದು ಎಂದು ಹೇಳಿದರು.

ಈ ಸಮಾರಂಭದಲ್ಲಿ ರಾಜ್ಯದ ಕೈಗಾರಿಕೋದ್ಯಮಿಗಳು, ಕಾರ್ಮಿಕರು, ಅಧಿಕಾರಿಗಳು, ಆಹ್ವಾನಿತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುರಕ್ಷತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಉತ್ತಮ ಕಾರ್ಖಾನೆಗಳು ಮತ್ತು ಕಾರ್ಮಿಕರು, (ಬೃಹತ್, ದೊಡ್ಡ, ಮಧ್ಯಮ ಮತ್ತು ಸಣ್ಣ ಕೈಗಾರಿಕಾ ಕ್ಷೇತ್ರಗಳಲ್ಲಿ ಹಾಗೂ ಅನ್ವಯಿಸುವ ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ) ಉತ್ತಮ ಸುರಕ್ಷತಾ ಅಧಿಕಾರಿಗಳು, ಉತ್ತಮ ವೈದ್ಯಾಧಿಕಾರಿಗಳು ಹಾಗೂ ಉತ್ಕೃಷ್ಟಮಟ್ಟದ ಸುರಕ್ಷತಾ ಪದ್ಧತಿಗಳನ್ನು ಅನುಸರಿಸುತ್ತಿರುವ/ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದ ಮತ್ತು ಉತ್ತಮ ನಿರ್ವಹಣೆ ಹೊಂದಿದ ಬಾಯ್ಲರ್ ಗಳು ಹಾಗೂ ರಾಜ್ಯಮಟ್ಟದ ಸುರಕ್ಷತಾ ಕ್ವಿಜ್‍ಗಳಲ್ಲಿ ಗೆದ್ದ ಕಾರ್ಮಿಕರುಗಳಿಗೆ ರಾಜ್ಯಮಟ್ಟದ ಸುರಕ್ಷತಾ ಪ್ರಶಸ್ತಿಗಳನ್ನು ಕಾರ್ಮಿಕ ಮತ್ತು ಸಕ್ಕರೆ ಸಚಿವರಾದ ಎ. ಶಿವರಾಂ ಹೆಬ್ಬಾರ್ ನೀಡಿ ಗೌರವಿಸಿದರು.

ರಾಷ್ಟ್ರೀಯ ಮಟ್ಟದಲ್ಲಿ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಸ್ವಯಂ ಆಂದೋಲನವನ್ನು ಹುಟ್ಟಿ ಹಾಕುವ, ಬೆಳೆಸುವ ಮತ್ತು ಪೋಷಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರವು 4ನೇ ಮಾರ್ಚ್ 1966ರಂದು ರಾಷ್ಟ್ರೀಯ ಸುರಕ್ಷತಾ ಪರಿಷತ್ ಅನ್ನು ಸ್ಥಾಪಿಸಿತು. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಪ್ರತಿ ವರ್ಷ 4ನೇ ಮಾರ್ಚ್ ಅನ್ನು ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯೆಂದು ಆಚರಿಸಲಾಗುತ್ತಿದೆ.

ಕಾರ್ಖಾನೆಗಳಲ್ಲಿ ಹಾಗೂ ಇತರೆ ಔದ್ಯಮಿಕ ಕ್ಷೇತ್ರಗಳ ಕಾರ್ಯಸ್ಥಳದಲ್ಲಿ ಸುರಕ್ಷತೆ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸಲಾಗುತ್ತಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ಇತರ ಔದ್ಯಮಿಕ ಕ್ಷೇತ್ರಗಳ ಉದ್ಯಮಿಗಳು, ಕಾರ್ಮಿಕರು, ಅನುಷ್ಠಾನಗೊಳಿಸುವ ಪ್ರಾಧಿಕಾರಗಳು, ಕಾರ್ಮಿಕ ಸಂಘಟನೆಗಳು ಕಾರ್ಮಿಕ ಇಲಾಖೆ ನೀಡುವ ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *