ಟೇಕಾಫ್‌ ವೇಳೆ ಕೈಕೊಟ್ಟ ಲ್ಯಾಂಡಿಂಗ್‌ ಗೇರ್‌ – ಬೋಯಿಂಗ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ

Public TV
1 Min Read

ವಾಷಿಂಗ್ಟನ್‌: ಅಮೆರಿಕದ ಡೆನ್ವರ್ ವಿಮಾನ (American Airlines) ನಿಲ್ದಾಣದಿಂದ (Denver Airport) ಮಿಯಾಮಿಗೆ ತೆರಳಬೇಕಿದ್ದ ಅಮೇರಿಕನ್ ಏರ್‌ಲೈನ್ಸ್‌ನ ಬೋಯಿಂಗ್ 737 MAX 8 ವಿಮಾನದ ಲ್ಯಾಂಡಿಂಗ್ ಗೇರ್ ಕೈಕೊಟ್ಟಿದೆ. ಪೈಲಟ್‌ ಟೇಕಾಫ್‌ ಸ್ಥಗಿತಗೊಳಿಸಿದ್ದು, ಈ ವೇಳೆ ವಿಮಾನದ ಹಿಂಭಾಗದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಿಮಾನದ ತುರ್ತು ದ್ವಾರಗಳಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 2:45 ಕ್ಕೆ ಈ ಘಟನೆ ಸಂಭವಿಸಿದೆ. ಈ ಅವಘಡದಲ್ಲಿ 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಇದರಲ್ಲಿ ಒಬ್ಬನಿಗೆ ಚಿಕಿತ್ಸೆ ಅಗತ್ಯವಿತ್ತು ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಫ್ಯುಯೆಲ್ ಸ್ವಿಚ್ ನಿರ್ವಹಿಸುವಾಗ ಜಾಗ್ರತೆ – ಪೈಲಟ್‍ಗಳಿಗೆ ಆದೇಶಿಸಿದ ಇತಿಹಾದ್ ಏರ್‌ಲೈನ್ಸ್‌

ಟೆಕಾಫ್‌ ಆಗುವ ಕೆಲವೇ ಕ್ಷಣಗಳ ಮೊದಲು ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಎಚ್ಚೆತ್ತ ಪೈಲಟ್ ವಿಮಾನವನ್ನು ಹಠಾತ್‌ ಆಗಿ ನಿಲ್ಲಿಸಿದ್ದಾರೆ. ಈ ವೇಳೆ ಟೈರ್‌ಗಳು ಮತ್ತು ಬ್ರೇಕಿಂಗ್ ಲ್ಯಾಂಡಿಂಗ್ ಗೇರ್ ಬಳಿ ಬೆಂಕಿ ಕಾಣಿಸಿದೆ. ವಿಮಾನ ಕೆಲ ಸಮಯ ರನ್‌ ವೇಯಲ್ಲೇ ನಿಂತಿದ್ದರಿಂದ 90 ವಿಮಾನಗಳ ಹಾರಾಟ ವಿಳಂಬವಾಗಿದೆ.

ವಿಮಾನದಲ್ಲಿದ್ದ ಎಲ್ಲಾ 173 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಿಮಾನವನ್ನು ರನ್‌ ವೇಯಿಂದ ಸ್ಥಳಾಂತರಿಸಲಾಗಿದೆ. ವಿಮಾನಯಾನ ಸಂಸ್ಥೆಯು ವಿಮಾನದಲ್ಲಿನ ಸಮಸ್ಯೆಯನ್ನು ಗುರುತಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ಆಕಾಸ ಏರ್ ವಿಮಾನಕ್ಕೆ ಟ್ರಕ್‌ ಡಿಕ್ಕಿ

Share This Article