ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿಲ್ಲ, ವಂಶಾಡಳಿತದ ರಾಜಕೀಯ ಅಪಾಯದಲ್ಲಿದೆ: ಅಮಿತ್‌ ಶಾ

Public TV
2 Min Read

ಲಕ್ನೋ: ಇಂದು ಪ್ರಜಾಪ್ರಭುತ್ವ (Democracy) ಅಪಾಯದಲ್ಲಿಲ್ಲ. ಜಾತಿವಾದ ಮತ್ತು ವಂಶಾಡಳಿತದ ರಾಜಕೀಯ ಅಪಾಯದಲ್ಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಕಾಂಗ್ರೆಸ್‌ಗೆ ಕುಟುಕಿದ್ದಾರೆ.

ಬಿಜೆಪಿಯಿಂದ (BJP) ಪ್ರಜಾಪ್ರಭುತ್ವಕ್ಕೆ ಅಪಾಯ ಎಂಬ ರಾಹುಲ್‌ ಗಾಂಧಿ ಟೀಕೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಯುಪಿಎ (UPA) ಸರ್ಕಾರ ತಂದ ಶಾಸನದ ಆಧಾರದ ಮೇಲೆ ಲೋಕಸಭೆಯಿಂದ ರಾಹುಲ್ ಗಾಂಧಿ (Rahul Gandhi) ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಹೇಳಿದರು.

ಉತ್ತರ ಪ್ರದೇಶದ ಕೌಶಂಬಿ ಮಹೋತ್ಸವವನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವತ್ತೂ ಸಭೆ, ಚರ್ಚೆ ಇಲ್ಲದೆ ಬಜೆಟ್ ಅಧಿವೇಶನ (Budgest Session) ಮುಗಿದಿರಲಿಲ್ಲ. ಆದರೆ ಈ ಬಾರಿ ಕಲಾಪ ನಡೆಸಲು ವಿಪಕ್ಷಗಳು ಬಿಡಲಿಲ್ಲ. ರಾಹುಲ್‌ ಗಾಂಧಿ ಅನರ್ಹತೆಯನ್ನು ಪ್ರಶ್ನಿಸಿ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿದ ವಿರೋಧ ಪಕ್ಷಗಳನ್ನು ದೇಶ ಯಾವತ್ತೂ ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಎಂದಿಗೂ ಉದ್ಧಾರವಾಗದು: ಗುಲಾಂ ನಬಿ ಆಜಾದ್

ಎಲ್ಲಾ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ 2024 ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು (Narendra Modi) ಪ್ರಧಾನಿಯನ್ನಾಗಿ ಆಯ್ಕೆ ಮಾಡುವಂತೆ ಜನರಲ್ಲಿ ಅವರು ಮನವಿ ಮಾಡಿದರು.

ಭಾರತದ ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್‌ ಜಾತೀಯತೆ, ರಾಜವಂಶದ ರಾಜಕೀಯ ಮತ್ತು ತುಷ್ಟೀಕರಣ ಮಾಡುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೂರನ್ನು ಸೋಲಿಸಿದ್ದಕ್ಕೆ ಕಾಂಗ್ರೆಸ್‌ಗೆ  ಭಯ ಎಂದು ಹೇಳಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಚೌಧರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಇತ್ತೀಚಿಗೆ ಸೂರತ್ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿತ್ತು. ಕೋರ್ಟ್‌ ತೀರ್ಪು ನೀಡಿದ 24 ಗಂಟೆಯಲ್ಲಿ ವಯನಾಡ್‌ ಕ್ಷೇತ್ರದ ಸಂಸದರಾಗಿದ್ದ ರಾಹುಲ್‌ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿತ್ತು. ಅದಾನಿ ಅಕ್ರಮಗಳನ್ನು ರಾಹುಲ್‌ ಗಾಂಧಿ ಪ್ರಶ್ನೆ ಮಾಡಿದ್ದಕ್ಕೆ ಬಿಜೆಪಿ ಸೇಡಿನ ಕ್ರಮವಾಗಿ ಅನರ್ಹ ಮಾಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿ ಸಂಸತ್‌ ಕಲಾಪದಲ್ಲಿ ಪ್ರತಿಭಟನೆ ನಡೆಸಿತ್ತು. ಅದಾನಿ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವಂತೆ ಕಾಂಗ್ರೆಸ್‌ ಪಟ್ಟು ಹಿಡಿದ ಪರಿಣಾಮ ಬಜೆಟ್‌ ಅಧಿವೇಶನದ ಕಲಾಪದಲ್ಲಿ ಯಾವುದೇ ಚರ್ಚೆ ನಡೆದಿರಲಿಲ್ಲ.

Share This Article