ಅಡ್ರೆಸ್ ತಪ್ಪಾಗಿದ್ದಕ್ಕೆ ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿತ ಕೇಸ್ – ಡೆಲಿವರಿ ಬಾಯ್ ಅರೆಸ್ಟ್

Public TV
1 Min Read

ಬೆಂಗಳೂರು: ಅಡ್ರೆಸ್‌ನಲ್ಲಿ ಸಿಂಗಲ್ ಡಿಜಿಟ್ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಸವೇಶ್ವರ ನಗರ (Basaveshwar Nagar) ಪೊಲೀಸರು ಡೆಲಿವರಿ ಬಾಯ್‌ನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿಷ್ಣುವರ್ಧನ್ ಎಂದು ಗುರುತಿಸಲಾಗಿದ್ದು, ಗ್ರಾಹಕ ಶಶಾಂಕ್ ಅವರ ಮೇಲೆ ಹಲ್ಲೆ ನಡೆಸಿದ್ದ.ಇದನ್ನೂ ಓದಿ: ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್ – ಕ್ಷಮೆಯಾಚಿಸಿದ ಕಂಪನಿ

ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದು, ಆರ್ಡರ್ ಡೆಲಿವರಿಗೆ ಹೋದಾಗ ಅದರಲ್ಲಿ ಪಕ್ಕದ ಮನೆ ಅಡ್ರೆಸ್ ಇತ್ತು, ಇದರಿಂದ ವಿಳಾಸ ಯಾಕೆ ತಪ್ಪಾಗಿ ನೀಡಿದ್ದೀರಿ ಎಂದು ಮಹಿಳೆಯನ್ನು ಕೇಳಿದ್ದೆ. ಈ ವೇಳೆ ಶಶಾಂಕ್ ಬಂದು ನನ್ನ ಜೊತೆ ಗಲಾಟೆ ಮಾಡಿದ್ದರು. ಹೀಗಾಗಿ ಕೋಪದಿಂದ ಅವರ ಮೇಲೆ ಹಲ್ಲೆ ಮಾಡಿದೆ ಎಂದು ಡೆಲಿವರಿ ಬಾಯ್ ಹೇಳಿಕೊಂಡಿದ್ದಾನೆ.

ಪ್ರಕರಣ ಏನು?
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಮೇ 21ರಂದು ಈ ಘಟನೆ ನಡೆದಿತ್ತು. ಆ್ಯಪ್‌ವೊಂದರಲ್ಲಿ ಹಲ್ಲೆಗೊಳಗಾದ ಶಶಾಂಕ್ ಪತ್ನಿ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ಬಂದಾಗ ಶಶಾಂಕ್ ನಾದಿನಿ ಸಾಮಗ್ರಿ ತೆಗೆದುಕೊಳ್ಳಲು ಹೋಗಿದ್ದರು. ಈ ವೇಳೆ ಅಡ್ರೆಸ್ ವಿಚಾರವಾಗಿ ಬಾಯಿಗೆ ಬಂದಹಾಗೇ ಮಾತಾಡುತ್ತಿದ್ದ. ಇದನ್ನು ಕೇಳಿಸಿಕೊಂಡು ಶಶಾಂಕ್ ಹೊರಗಡೆ ಹೋಗಿ ಆತನೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದ್ದರು. ಆಗ ಒಮ್ಮೆಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದು, ಕಣ್ಣಿಗೆ ಗಾಯವಾಗಿತ್ತು. ಹಲ್ಲೆ ನಡೆಸಿದ ದೃಶ್ಯಗಳು ಅದೇ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗ್ರಾಹಕ ಶಶಾಂಕ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿತ್ತು. ಬಳಿಕ ಡೆಲಿವರಿ ಕಂಪನಿ ಶಶಾಂಕ್ ಅವರಿಗೆ ಕ್ಷಮೆ ಕೇಳಿತ್ತು.

ಈ ಕುರಿತು ಶಶಾಂಕ್ ಮಾತನಾಡಿ, ಹಲ್ಲೆಯಿಂದಾಗಿ ನನ್ನ ಕಣ್ಣಿನ ಕೆಳಗಿನ ಮೂಳೆ ಕಟ್ ಆಗಿದೆ. ಹೀಗಾಗಿ ಡಾಕ್ಟರ್ ಇನ್ನೊಮ್ಮೆ ಚೆಕ್ ಮಾಡುತ್ತೇನೆ ಎಂದಿದ್ದು, ಒಂದು ವೇಳೆ ಸರಿಹೋಗದಿದ್ದರೆ ಆಪರೇಷನ್ ಮಾಡಬೇಕು ಎಂದು ಹೇಳಿದ್ದರು. ಸಂಬಂಧಪಟ್ಟ ಕಂಪನಿಯವರು, ಪೊಲೀಸರು ನನಗೆ ನ್ಯಾಯಕೊಡಿಸಬೇಕು ಎಂದು ಕೇಳಿಕೊಂಡಿದ್ದರು.ಇದನ್ನೂ ಓದಿ:ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

Share This Article