ಸೀಜ್ ಮಾಡಿದ್ದ ಮದ್ಯ ಭಾರೀ ಡಿಸ್ಕೌಂಟ್‍ನಲ್ಲಿ ಮಾರಾಟ

Public TV
1 Min Read

ನವದೆಹಲಿ: ಸೀಜ್ ಮಾಡಿದ್ದ ಮದ್ಯವನ್ನು ನಾಶಪಡಿಸುವ ಬದಲು ದೆಹಲಿ ಸರ್ಕಾರ ಭಾರೀ ರಿಯಾಯಿತಿಯಲ್ಲಿ ಮಾರಾಟ ಮಾಡಲು ಮುಂದಾಗಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದೆ.

ರಾಜ್ಯದಲ್ಲಿ ವಿವಿಧ ಇಲಾಖೆಗಳು ಹಲವು ಸಂದರ್ಭದಲ್ಲಿ ಅಕ್ರಮ ಮದ್ಯವನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಮದ್ಯವನ್ನು ನಾಶ ಮಾಡುವ ಬದಲು ಅದನ್ನು ಶೇ.25ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ದೆಹಲಿ ಸರ್ಕಾರ ಮುಂದಾಗಿದೆ. ಆದ್ದರಿಂದ ಮದ್ಯ ಪ್ರಿಯರ ಚಿತ್ತ ಸದ್ಯ ದೆಹಲಿ ಸರ್ಕಾರದ ಮೇಲಿದೆ.

ಇಲ್ಲಿಯವರೆಗೆ ಕಾನೂನು ಪ್ರಕ್ರಿಯೆಗಳೆಲ್ಲಾ ಮುಗಿದ ಮೇಲೆ ಅಧಿಕಾರಿಗಳ ಸಮ್ಮುಖದಲ್ಲಿ ವಶಪಡಿಸಿಕೊಂಡ ಮದ್ಯವನ್ನು ನಾಶ ಮಾಡಲಾಗುತ್ತಿತ್ತು. ಆದರೆ ಇನ್ನುಮುಂದೆ ಅಬಕಾರಿ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಮದ್ಯಗಳನ್ನು ಲ್ಯಾಬ್‍ಗಳಲ್ಲಿ ಪರೀಕ್ಷೆಗೊಳಪಡಿಸಿ, ಅವುಗಳು ಸೇವಿಸಲು ಯೋಗ್ಯವಾಗಿದ್ದರೆ ಮಾತ್ರ ಆ ಮದ್ಯವನ್ನು ಮುಟ್ಟುಗೋಲು ಹಾಕಿದ ಏಳು ದಿನದಲ್ಲಿ ಮಾರಾಟ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ದೆಹಲಿಯೇ ಈ ವಿಧಾನವನ್ನ ಅಳವಡಿಕೊಂಡ ಮೊದಲ ರಾಜ್ಯವಾಗಲಿದ್ದು, ಮೊದಲ ಹಂತದಲ್ಲಿ 8 ಮಾರಾಟಗಾರರಿಗೆ ಮಾತ್ರ ವಶಪಡಿಸಿಕೊಂಡ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ಅಲ್ಲದೆ ಹೀಗೆ ಮಾರಾಟಗೊಳ್ಳುವ ಮದ್ಯಗಳ ಬಾಟಲಿ ಮೇಲೆ `ಅಧಿಕೃತ ಜಪ್ತಿ ಮದ್ಯ’, `ದೆಹಲಿಯಲ್ಲಿ ಮಾರಾಟಕ್ಕೆ ಮಾತ್ರ’ ಎಂದು ನಮೂದಿಸುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ವರ್ಷ ಅಬಕಾರಿ ಇಲಾಖೆ ಅಕ್ರಮವಾಗಿ ಸಾಗಿಸುವ ಅಥವಾ ಮಾರಾಟ ಮಾಡುವ ಸುಮಾರು 2.5 ಲಕ್ಷ ಬಾಟಲಿಗಳ ಮದ್ಯವನ್ನು ವಶಪಡಿಸಿಕೊಳ್ಳುತ್ತದೆ. ಆದರೆ 2018-19 ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆ ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದೆ.

ಈ ಮದ್ಯಗಳನ್ನು ನೆರೆಯ ಹರ್ಯಾಣದಿಂದ ಕಡಿಮೆ ದರದಲ್ಲಿ ಖರೀದಿಸಿ ದೆಹಲಿಗೆ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಅಲ್ಲದೆ ಇವುಗಳನ್ನು ಮಳಿಗೆಗಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *