ದೆಹಲಿಗೆ ಹೆಚ್ಚುವರಿ ನೀರು ಬಿಡುವಂತೆ ಹರಿಯಾಣ, ಹಿಮಾಚಲಪ್ರದೇಶಕ್ಕೆ ಸುಪ್ರೀಂ ಸೂಚನೆ

Public TV
1 Min Read

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನೀರಿನ ಬಿಕ್ಕಟ್ಟು ಎದರಾಗಿರುವ ಹಿನ್ನೆಲೆಯಲ್ಲಿ 137 ಕ್ಯೂಸೆಕ್ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಎಂದು ಸುಪ್ರೀಂಕೋರ್ಟ್‌ (Supreme Court) ಹರಿಯಾಣ ಹಾಗೂ ಹಿಮಾಚಲ ಪ್ರದೇಶಕ್ಕೆ ನಿರ್ದೇಶನ ನೀಡಿದೆ.

ದೆಹಲಿಯಲ್ಲಿ ಹೆಚ್ಚುತ್ತಿರುವ ನೀರಿನ ಬಿಕ್ಕಟ್ಟಿನ ಕುರಿತು ದೆಹಲಿ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಮಿಶ್ರಾ ಅವರ ಪೀಠ, ಹಿಮಾಚಲ ಪ್ರದೇಶಕ್ಕೆ 137 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ.

ಹಿಮಾಚಲ ಪ್ರದೇಶದಿಂದ (Himachal Pradesh) ಬಿಡುಗಡೆಯಾದ ಹೆಚ್ಚುವರಿ ನೀರನ್ನು ರಾಷ್ಟ್ರ ರಾಜಧಾನಿಗೆ ತಲುಪುವಂತೆ ನೋಡಿಕೊಳ್ಳುವಂತೆ ಪೀಠವು ಹರಿಯಾಣ ಸರ್ಕಾರಕ್ಕೆ ನಿರ್ದೇಶಿಸಿದೆ. ಅಲ್ಲದೆ ದೆಹಲಿ ಸರ್ಕಾರವು ನೀರನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು ಎಂದು ಸೂಚಿಸಿದೆ. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ ಎಂದಿದ್ದ ಚಲುವರಾಯಸ್ವಾಮಿ ವೀಡಿಯೋ ವೈರಲ್

ಜೂನ್ 7 ರಂದು ಹರಿಯಾಣಕ್ಕೆ (Haryana) ಪೂರ್ವ ಸೂಚನೆಯೊಂದಿಗೆ 137 ಕ್ಯೂಸೆಕ್ ಹೆಚ್ಚುವರಿ ನೀರನ್ನು ಹಿಮಾಚಲ ಪ್ರದೇಶವು ಬಿಡುಗಡೆ ಮಾಡಬೇಕು ಎಂದು ಪೀಠ ಹೇಳಿದೆ. ಅಲ್ಲದೇ ನೀರಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಪೀಠ ಅಭಿಪ್ರಾಯಪಟ್ಟಿದೆ. ಬಳಿಕ ಜೂನ್ 10ಕ್ಕೆ ವಿಚಾರಣೆಯನ್ನು ಮುಂದೂಡಿತು.

Share This Article