ಪಶ್ಚಾತ್ತಾಪವಿಲ್ಲ, ನನ್ನ ತಿರಸ್ಕರಿಸಿದ್ದಕ್ಕೆ ಆಕೆಯನ್ನು ಕೊಂದೆ- ತಪ್ಪೊಪ್ಪಿಕೊಂಡ ಸಾಹಿಲ್

Public TV
2 Min Read

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 16 ವರ್ಷದ ಹುಡುಗಿಯನ್ನು ಚುಚ್ಚಿ, ಚುಚ್ಚಿ ಕೊಲೆಗೈದ ಪ್ರಕರಣ ಸಂಬಂಧ ಇದೀಗ ಆರೋಪಿ ಸಾಹಿಲ್ (Sahil) ಪೊಲೀಸರ ಮುಂದೆ ಕೊಲೆಗೆ ಕಾರಣವೇನು ಎಂಬುದನ್ನು ಬಾಯ್ಬಿಟ್ಟಿದ್ದಾನೆ.

ಪ್ರಕರಣ ಸಂಬಂಧ ಸೋಮವಾರ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ 20 ವರ್ಷದ ಸಾಹಿಲ್‍ನನ್ನು ಬಂಧಿಸಲಾಗಿತ್ತು. ಬಳಿಕ ವಿಚಾರಣೆ ನಡೆಸಿದಾಗ, ಆಕೆಯನ್ನು ಕೊಂದಿದ್ದಕ್ಕೆ ನನಗೆ ಪಶ್ಚಾತ್ತಾಪವಿಲ್ಲ. ಯಾಕಂದ್ರೆ ಆಕೆ ನನ್ನನ್ನು ತಿರಸ್ಕರಿಸಿದ್ದಾಳೆ. ಹೀಗಾಗಿ ಕೋಪದ ಭರದಲ್ಲಿ ಕೊಲೆ ಮಾಡಿದೆ ಎಂದು ತನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಆಕೆ ತನ್ನೊಂದಿಗೆ ಬ್ರೇಕ್ ಅಪ್ (Love BreakUp) ಮಾಡಲು ಬಯಸಿದ್ದಳು. ಅಲ್ಲದೆ ಬೇರೊಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಆಕೆಯ ಗೆಳೆಯ ನನ್ನ ಮೇಲೆ ಗೂಂಡಾಗರಿ ನಡೆಸಿದ್ದಾನೆ. ಅಲ್ಲದೆ ಇನ್ನು ಮುಂದೆ ತೊಂದರೆ ಕೊಟ್ಟರೆ ಪೊಲೀಸರಿಗೆ ದೂರು ನೀಡುವುದಾಗಿ ಆಕೆ ಬೆದರಿಸಿದ್ದಳು ಎಂದು ಸಾಹಿಲ್ ಹೇಳಿದ್ದಾನೆ.

ಹುಡುಗಿ ಆತನನ್ನು ಬೆದರಿಸಲು ಆಟಿಕೆ ಪಿಸ್ತೂಲ್ ಕೂಡ ಬಳಸಿದ್ದಳು. ಹತ್ಯೆಯ ಹಿಂದಿನ ದಿನ ಇಬ್ಬರೂ ಜಗಳವಾಡಿದ್ದರು. ಕೊಲೆ ಮಾಡುವ ಸಂದರ್ಭದಲ್ಲಿ ಸಾಹಿಲ್ ಕುಡಿದಿದ್ದ ಎನ್ನಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಂಟಿ ಮನೆಗೆ ತಲುಪಿದ ಬಳಿಕ ತಂದೆಗೆ ಕರೆ- ಸಾಹಿಲ್ ಸಿಕ್ಕಿಬಿದ್ದಿದ್ದು ಹೇಗೆ?

ಭಾನುವಾರ ಸಂಜೆ, ಮೃತ ಹುಡುಗಿ ಸಾಕ್ಷಿ ಸ್ನೇಹಿತನ ಮಗನ ಹುಟ್ಟುಹಬ್ಬದ ಪಾರ್ಟಿ (Birthday Party) ಗೆ ಹೋಗುತ್ತಿದ್ದಾಗ ಸಾಹಿಲ್ ಅವಳನ್ನು ಗೋಡೆಗೆ ಬಿಗಿ ಹಿಡಿದು ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆಕೆ ಕುಸಿದು ಬಿದ್ದಿದ್ದಾಳೆ. ಆದರೂ ಬಿಡದ ಸಾಹಿಲ್ ಆಕೆಯ ಮೇಲೆ 3-4 ಬಾರಿ ಕಲ್ಲು ಎತ್ತಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಎಲ್ಲಾ ದೃಶ್ಯ ಸ್ಥಳೀಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

ಕೊಲೆಯ ಬಳಿಕ ಸಾಹಿಲ್, ಚಾಕು ಹಾಗೂ ಮೊಬೈಲ್ ಫೋನ್ ಎಸೆದು ಬುಲಂದ್‍ಶಹರ್‍ಗೆ ಬಸ್ಸಿನಲ್ಲಿ ತೆರಳಿದ್ದಾನೆ. ತನ್ನ ಚಿಕ್ಕಮ್ಮನ ಮನೆಯಲ್ಲಿ ಅವಿತಿದ್ದನು. ಇತ್ತ ಕೊಲೆಯಾಗಿ ಸುಮಾರು 25 ನಿಮಿಷಗಳ ಬಳಿಕ ಸ್ಥಳೀಯ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲಿಯವರೆಗೆ ಆಕೆಯ ದೇಹ ಬೀದಿಯಲ್ಲಿಯೇ ಬಿದ್ದಿತ್ತು. ಆಕೆಯ ದೇಹದಲ್ಲಿ 34 ಗಾಯಗಳಿದ್ದು, ತಲೆಬುರುಡೆ ಛಿದ್ರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಹಿಲ್ ಜೊತೆ ಹುಡುಗಿ ಕಳೆದ 3 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಳು. ಆದರೆ ಇತ್ತೀಚೆಗೆ ಅವಳು ಸಂಬಂಧವನ್ನು ಕೊನೆಗೊಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಸಮಯದಿಂದ ಹುಡುಗಿ ನಿರ್ಲಕ್ಷಿಸುತ್ತಿದ್ದರಿಂದ ಸಾಹಿಲ್ ಕೋಪಗೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share This Article