ನವದೆಹಲಿ: ಶಾಲಾ ಶಿಕ್ಷಕನ ಕಿರುಕುಳಕ್ಕೆ ಬೇಸತ್ತು 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
16 ವರ್ಷದ ಶೌರ್ಯ ಪಾಟೀಲ್ ಆತ್ಮಹತ್ಯೆಗೆ ಶರಣಾದ ಬಾಲಕ. ಶಾಲಾ ಶಿಕ್ಷಕರೊಬ್ಬರು ಈತನನ್ನು ಅಪಹಾಸ್ಯ ಮಾಡುತ್ತಿದ್ದರು. ಅಸಭ್ಯವಾಗಿ ನಡೆಸಿಕೊಂಡರೆಂಬ ಆರೋಪ ಕೇಳಿಬಂದಿದೆ. ಶಾಲಾ ಶಿಕ್ಷಕನ ವಿರುದ್ಧ ಬಾಲಕನ ತಂದೆ ಪ್ರದೀಪ್ ಪಾಟೀಲ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸೆಂಟ್ರಲ್ ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 2ರಲ್ಲಿ ಟ್ರ್ಯಾಕ್‌ಗೆ ಜಿಗಿದು ಸೇಂಟ್ ಕೊಲಂಬಾ ಶಾಲೆಯ ಶೌರ್ಯ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಶಾಲಾ ಬ್ಯಾಗ್‌ನಿಂದ ಡೆತ್‌ನೋಟ್ ವಶಕ್ಕೆ ಪಡೆಯಲಾಗಿದ್ದು, ತನ್ನ ಕೃತ್ಯಕ್ಕೆ ಮೂವರು ಶಿಕ್ಷಕರು ಕಾರಣ ಎಂದು ವಿದ್ಯಾರ್ಥಿ ದೂಷಿಸಿದ್ದಾನೆ.
ಕಳೆದ ಒಂದು ವರ್ಷದಿಂದ ನನ್ನ ಮಗನಿಗೆ ಶಿಕ್ಷಕರು ತೊಂದರೆ ಕೊಟ್ಟಿದ್ದಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದೆವು. ಆದರೆ, ಅವರು ನನ್ನ ಮಗನ ಕಲಿಕೆ ಮೇಲೆಯೇ ಆರೋಪ ಮಾಡಿದ್ದರು. ತರಗತಿಗಳ ಸಮಯದಲ್ಲಿ ಗಮನ ಹರಿಸಬೇಕು, ಗಣಿತದ ಅಂಕಗಳು ಕಳಪೆಯಾಗಿವೆ, ಅವನು ಅಧ್ಯಯನದ ಮೇಲೆ ಗಮನಹರಿಸಲು ಇಷ್ಟಪಡುವುದಿಲ್ಲ ಅಂತ ಹೇಳಿದ್ದರೆಂದು ಬಾಲಕನ ತಂದೆ ತಿಳಿಸಿದ್ದಾರೆ.
ಶೌರ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಶಾಲೆಯಲ್ಲಿ ನೃತ್ಯ ಅಭ್ಯಾಸದಲ್ಲಿ ಪಾಲ್ಗೊಂಡಿದ್ದ. ಶಾಲೆಯಲ್ಲಿ ಸ್ಟೇಜ್ ಮೇಲೆ ನೃತ್ಯ ಅಭ್ಯಾಸ ಮಾಡುವಾಗ ಬಿದ್ದಿದ್ದ. ಉದ್ದೇಶಪೂರ್ವಕವಾಗಿ ಬಿದ್ದಿದ್ದಾನೆ ಎಂದು ಶಿಕ್ಷಕರು ಅವನನ್ನು ನೃತ್ಯದಿಂದ ಸಂಪೂರ್ಣವಾಗಿ ತೆಗೆದುಹಾಕಿದರು. ಅವನು ನಾಟಕ ಮತ್ತು ಓವರ್ ಆಕ್ಟಿಂಗ್ ಮಾಡುತ್ತಿದ್ದಾನೆಂದು ಶಿಕ್ಷಕರು ಆರೋಪಿಸಿದ್ದರು. ಅದಾದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶೌರ್ಯನ ಸ್ನೇಹಿತರು ತಿಳಿಸಿದ್ದಾರೆ.
ಒಮ್ಮೆ ಶೌರ್ಯ ಅಳುತ್ತಿದ್ದಾಗ, ‘ನೀನು ಎಷ್ಟು ಬೇಕಾದರೂ ಅಳು.. ನಾವು ತಲೆಕೆಡಿಸಿಕೊಳ್ಳಲ್ಲ’ ಅಂತ ಶಿಕ್ಷಕರು ಹೇಳಿದ್ದರು. ಟಿಸಿ ಕೊಟ್ಟು ಮನೆಗೆ ಕಳುಹಿಸುವುದಾಗಿಯೂ ಬೆದರಿಕೆ ಹಾಕಿದ್ದರೆಂದು ಸ್ನೇಹಿತರು ವಿವರಿಸಿದ್ದಾರೆ.
ಕ್ಷಮಿಸು ಅಮ್ಮ, ನಾನು ನಿನ್ನ ಹೃದಯವನ್ನು ಘಾಸಿಗೊಳಿಸಿದ್ದೇನೆ. ಶಾಲೆಯ ಶಿಕ್ಷಕರು ಹೀಗಿದ್ದಾರೆ, ನಾನೇನು ಹೇಳಲಿ… ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ನನ್ನ ಕೊನೆಯ ಆಸೆ. ಬೇರೆ ಯಾವುದೇ ಮಗು ಇಂತಹ ಹೆಜ್ಜೆ ಇಡಲು ನಾನು ಬಯಸುವುದಿಲ್ಲ ಎಂದು ಡೆತ್‌ನೋಟ್‌ನಲ್ಲಿ ಬಾಲಕ ಬರೆದಿದ್ದಾನೆ.

