‘ಬರೀ ಮನೆಯಲ್ಲ, ಮದುವೆ ಕನಸುಗಳೂ ಸುಟ್ಟು ಹೋಗಿವೆ’

Public TV
2 Min Read

ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರದ ಬಳಿಕ ಕರಳು ಕಿತ್ತುವ ಕಥೆಗಳು ಒಂದೊದಾಗಿ ಕಣ್ಣ ಮುಂದೆ ಬರುತ್ತಿವೆ. ದುಷ್ಕರ್ಮಿಗಳ ಬೆಂಕಿಯಾಟಕ್ಕೆ ಬದುಕು ಸುಟ್ಟು ಹೋಗಿದೆ. ಕಂಡ ಅದೇಷ್ಟೊ ಭವಿಷ್ಯದ ಕನಸುಗಳು ಭಸ್ಮವಾಗಿವೆ.

ಹೌದು, ದೆಹಲಿಯಲ್ಲಿ ಪರಿಸ್ಥಿತಿ ಸುಧಾರಿಸಿದೆ. ಬೆಂಕಿ ಹೊತ್ತುವಾಗ ಆತಂಕಕ್ಕೀಡಾಗಿ ಮನೆ ಬಿಟ್ಟಿದ್ದ ಕುಟುಂಬಗಳು ವಾಪಸ್ ಆಗುತ್ತಿವೆ. ಕನಸಿನ ಮನೆಗಳು ಸುಟ್ಟು ಕರಕಲಾಗಿದ್ದನ್ನು ಕಂಡು ಕಣ್ಣೀರಿಡುತ್ತಿದ್ದಾರೆ. ಕಜೋರಿ ಖಾಸ್‍ನ ಇಲಿಯಾಸ್ ಕುಟುಂಬದ ಕಥೆಯೂ ಇದಕ್ಕೆ ಹೊರೆತಾಗಿಲ್ಲ.

ಇಲಿಯಾಸ್, ಕಜೋರಿ ಖಾಸ್‍ನ ನಿವಾಸಿ, ಕಳೆದ ಇಪ್ಪತ್ತು ವರ್ಷಗಳಿಂದ ವಾಸವಾಗಿರುವ ಅವರು ಬೆವರು ಹರಿಸಿ ಮನೆ ಕಟ್ಟಿಕೊಂಡಿದ್ದರು. ಕೆಳ ಅಂತಸ್ತಿನಲ್ಲಿ ಬಡಿಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳ ತುಂಬು ಕುಟುಂಬ ಈಗ ಬೀದಿಗೆ ಬಂದಿದೆ. ಮುಂದಿನ ತಿಂಗಳ ನಿಗದಿಯಾಗಿದ್ದ ಮಕ್ಕಳ ಮದ್ವೆಗೆ ತಂದಿದ್ದ ಎಲ್ಲಾ ವಸ್ತುಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಬೂದಿಯಾಗಿವೆ.

ಇಲಿಯಾಸ್ ಅವರ ಇಬ್ಬರು ಪುತ್ರಿಯರಾದ ನಗ್ಮಾ ಮತ್ತು ಫರ್ಜಾನ್ ಮದುವೆ ಮಾರ್ಚ್ ಅಂತ್ಯಕ್ಕೆ ನಿಗದಿಯಾಗಿತ್ತು. ಮದುವೆಗೆ ಎಲ್ಲ ರೀತಿಯ ತಯಾರಿ ಅವರು ಮಾಡಿಕೊಂಡಿದ್ದರು. ಚಿನ್ನಾಭರಣ ಸೇರಿ ಸುಮಾರು 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಎರಡು ಮದುವೆಯಾಗಿ ಖರೀದಿ ಮಾಡಿದ್ದರು. ಇಡೀ ಕುಟುಂಬ ಮದುವೆ ದಿನಗಳನ್ನು ಸಂಭ್ರಮದಿಂದ ಎದುರು ನೋಡುತ್ತಿತ್ತು. ಆದರೆ ಮಂಗಳವಾರ ನಡೆದ ಘಟನೆಯಿಂದ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಪ್ರಾಣ ಭೀತಿಯಲ್ಲಿ ಓಡಿ ಹೋಗಿದ್ದ ಕುಟುಂಬಗಳು ವಾಪಸ್ ಬಂದು ಮನೆಯೊಳಗೆ ತಮ್ಮ ಕನಸುಗಳು ಸುಟ್ಟಿದ್ದು ಕಂಡು ಆಕ್ರಂದಿಸುತ್ತಿದ್ದರು. ಇದನ್ನು ನೋಡುತ್ತಿದ್ದ ಎಂತವರಿಗೂ ಕರಳು ಹಿಂಡುದಂತಾಗುತ್ತಿತ್ತು.

ಬಡಿಗೆ ಕೆಲಸ ಮಾಡುತ್ತಿದ್ದ ಹಿನ್ನೆಲೆ ಇಲಿಯಾಸ್ ಲಕ್ಷಾಂತರ ಮೌಲ್ಯದ ಕಟ್ಟಿಗೆಗಳನ್ನು ಮನೆಯ ಕೆಳ ಅಂತಸ್ತಿನಲ್ಲಿ ಸಂಗ್ರಹಿಸಿದ್ದರು. ಮನೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ ಕಟ್ಟಿಗೆಗಳಿಗೂ ಇದು ವ್ಯಾಪಿಸಿದ್ದು ಮೂರು ಅಂತಸ್ತಿನ ಮನೆ ಸಂಪೂರ್ಣ ಸುಟ್ಟಿದೆ. ಅಲ್ಲದೆ ಮನೆಯ ಎಲ್ಲ ದಾಖಲೆಗಳು ಕೂಡ ನಾಶವಾಗಿದೆ. ಮದುವೆ ಸಿದ್ಧತೆಯ ವಸ್ತುಗಳು ಸೇರಿ ಕೆಲಸದ ಸಾಮಗ್ರಿಗಳು, ಯಂತ್ರಗಳು ಇಡೀ ಮನೆ ಹಾನಿಯಾಗಿದ್ದು ಲಕ್ಷಾಂತರ ಮೌಲ್ಯ ಆಸ್ತಿ ಪಾಸ್ತಿ ನಷ್ಟವಾಗಿದೆ. ಘಟನೆಯಿಂದ ಆಘಾತಕ್ಕೆ ಈ ಕುಟುಂಬ ಒಳಗಾಗಿದ್ದು ಮದುವೆ ನಿಂತು ಹೋಗುವ ಭೀತಿಯಲ್ಲಿದೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ನಗ್ಮಾ, ಮದುವೆ ಮಾಡಿಕೊಂಡ ಸಿದ್ಧತೆಗಳು ಎಲ್ಲವೂ ನಾಶವಾಗಿದೆ. ಟೇಲರಿಂಗ್ ಮಾಡಿಕೊಂಡಿದ್ದೆ ಅದೇಲ್ಲವೂ ಹೊಯ್ತು. ಕಷ್ಟ ಪಟ್ಟ ಪಡೆದ ಡಿಗ್ರಿ ಸರ್ಟಿಫಿಕೇಟ್‍ಗಳು ಸುಟ್ಟು ಹೋಗಿವೆ ಎಂದು ನೋವನ್ನು ಹಂಚಿಕೊಂಡರು. ಏಕಾಏಕಿ ಬಂದ ಗುಂಪೊಂದು ಪೆಟ್ರೋಲ್ ಬಾಂಬ್ ಮೂಲಕ ದಾಳಿ ಮಾಡಿತ್ತು. ಮನೆಯಿಂದ ಓಡಿ ಪ್ರಾಣ ಉಳಿಸಿಕೊಂಡೆವು. ಮಕ್ಕಳ ಮದುವೆ ನಿಗದಿ ಮಾಡಿದೆ. ಮದುವೆ ನಿಲ್ಲುವ ಭೀತಿ ಇದೆ ತಮ್ಮ ಆತಂಕವನ್ನು ಇಲಿಯಾಸ್ ಕುಟುಂಬಸ್ಥರು ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *