ಬಾಂಗ್ಲಾದಿಂದ ಭಾರತ ಮೇಲೆ ದಾಳಿಗೆ ಸಂಚು – ಗಡಿಯಲ್ಲಿ ಲಷ್ಕರ್ ಉಗ್ರ ಅರೆಸ್ಟ್‌

1 Min Read

ನವದೆಹಲಿ: ಬಾಂಗ್ಲಾದೇಶದಲ್ಲಿ (Bangladesh) ನೆಲೆಸಿ ಭಾರತದ ಮೇಲೆ ಭಯೋತ್ಪಾದಕ ದಾಳಿಗೆ ಹೊಂಚು ಹಾಕುತ್ತಿದ್ದ ಲಷ್ಕರ್-ಎ-ತೈಬಾ ಕಮಾಂಡರ್ (Lakshar-e-Taiba) ಶಬೀರ್ ಅಹ್ಮದ್ ಲೋನ್‌ನನ್ನು ಬಾಂಗ್ಲಾ ಗಡಿಯಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದ ಕಂಗನ್ ನಿವಾಸಿ ರಾಜಾ, ಕಾಶ್ಮೀರಿ ಅಲಿಯಾಸ್ ಶಬ್ಬೀರ್ ಅಹ್ಮದ್ ಲೋನ್ (Shabbir Ahmed Lone) ಬಂಧಿತ ಉಗ್ರ. ಎಲ್‌ಇಟಿ ಕಮಾಂಡರ್ ಆಗಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಹಾರ್ಮುಜ್ ತೆರೆಯದಿದ್ರೆ ಎಲ್ಲಾ ತೈಲ ಬಾವಿಗಳು, ವಿದ್ಯುತ್‌ ಸ್ಥಾವರ ಸ್ಫೋಟ: ಇರಾನ್‌ಗೆ ಟ್ರಂಪ್‌ ಲಾಸ್ಟ್‌ ವಾರ್ನಿಂಗ್‌

ಈ ಹಿಂದೆ 2007ರಲ್ಲಿ ದೆಹಲಿ ಪೊಲೀಸರು ಭಯೋತ್ಪಾದನೆಗೆ ಸಂಬಂಧಿಸಿದ ಆರೋಪದ ಮೇಲೆ ಶಬ್ಬೀರ್ ಅಹ್ಮದ್‌ನನ್ನು ಬಂಧಿಸಿದ್ದರು. 2019ರಲ್ಲಿ ಜಾಮೀನು ಪಡೆದ ನಂತರ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದ. ಬಳಿಕ ಅಲ್ಲಿ ಮತ್ತೆ ಲಷ್ಕರ್-ಎ-ತೈಬಾ ಮತ್ತೊಂದು ಸಂಘಟನೆಯನ್ನು ಸ್ಥಾಪಿಸಿದ್ದ. ಆನಂತರ ಬಾಂಗ್ಲಾದಿಂದಲೇ ಭಾರತದ ಮೇಲೆ ಭಯೋತ್ಪಾದನಾ ದಾಳಿಗೆ ಹೊಂಚು ಹಾಕುವುದರಲ್ಲಿ ಭಾಗಿಯಾಗಿದ್ದ.

ಢಾಕಾ ಬಳಿಯ ಅಡಗುತಾಣದಿಂದ ಭಯೋತ್ಪಾದಕ ಘಟಕವನ್ನು ನಡೆಸುತ್ತಿದ್ದ. ಅಲ್ಲದೇ ದೆಹಲಿ, ಕೋಲ್ಕತ್ತಾ ಮತ್ತು ತಮಿಳುನಾಡಿನ ಕೆಲವು ಭಾಗಗಳು ಸೇರಿದಂತೆ ಅನೇಕ ನಗರಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಯುವಕರನ್ನು ನೇಮಕ ಮಾಡಿಕೊಳ್ಳುವಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಎರಡು ತಿಂಗಳ ಕಾಲದ ಕಾರ್ಯಾಚರಣೆ ನಡೆಸಿದ ಬಳಿಕ ದೆಹಲಿ ಪೊಲೀಸರು ವಿಶೇಷ ಘಟಕಗಳ ನೆರವಿನೊಂದಿಗೆ ಉಗ್ರನನ್ನು ಬಂಧಿಸಿದ್ದಾರೆ.

ಇನ್ನೂ ದೆಹಲಿಯೊಂದಿಗೆ ಸಂಪರ್ಕ ಹೊಂದಿರುವ ಮತ್ತೊಬ್ಬ ಪ್ರಮುಖ ವ್ಯಕ್ತಿ ಶೇಖ್ ಸಜ್ಜದ್ ಗುಲ್‌ನನ್ನು ಪತ್ತೆಹಚ್ಚಲು ಏಜೆನ್ಸಿಗಳು ಪ್ರಯತ್ನಿಸುತ್ತಿವೆ. 2002ರಲ್ಲಿ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಅರೆಸ್ಟ್ ಆಗಿದ್ದ ಗುಲ್ 2003ರಲ್ಲಿ ಶಿಕ್ಷೆಗೊಳಗಾಗಿದ್ದ. ಅಲ್ಲಿಂದ ಒಂದು ದಶಕಕ್ಕೂ ಅಧಿಕ ಸಮಯ ತಿಹಾರ್ ಜೈಲಿನಲ್ಲಿದ್ದ. ಬಳಿಕ 2017ರಲ್ಲಿ ಬಿಡುಗಡೆಯಾಗಿತ್ತು. ಆನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ ಎನ್ನಲಾಗಿತ್ತು. ಸದ್ಯ ಲಷ್ಕರ್-ಎ-ತೈಬಾದ ಪ್ರಾಕ್ಸಿ ಸಂಘಟನೆ ಎಂದು ಪರಿಗಣಿಸಲಾದ ದಿ ರೆಸಿಸ್ಟೆನ್ಸ್ ಫ್ರಂಟ್‌ಅನ್ನು ಮುನ್ನಡೆಸುತ್ತಿದ್ದಾನೆ ಎನ್ನಲಾಗಿದೆ.ಇದನ್ನೂ ಓದಿ: 6 ಲಕ್ಷ ಲಂಚ ಪಡೆಯುವಾಗ ʻಲೋಕಾʼ ಬಲೆಗೆ ಬಿದ್ದ ಕಮರ್ಷಿಯಲ್ ಟ್ಯಾಕ್ಸ್ ಡಿಸಿ

Share This Article