ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ಫೇಕ್ (Deepfake) ಎಐ-ರಚಿಸಿದ ವೀಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ. ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರು (Delhi Police) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. “ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವೀಡಿಯೋಗೆ ಸಂಬಂಧಿಸಿದಂತೆ, ಐಪಿಸಿಯ ಎಫ್ಐಆರ್ ಯು/ಎಸ್ 465 ಮತ್ತು 469, 1860 ಮತ್ತು ಐಟಿ ಆಕ್ಟ್, 2000 ರ ಸೆಕ್ಷನ್ 66 ಸಿ ಮತ್ತು 66 ಇ ಅನ್ನು ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ನಲ್ಲಿ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಡೀಪ್ಫೇಕ್ ವಿಡಿಯೋ : ಕನ್ನಡದ ನಟಿಯರ ಆತಂಕ
ಅರೆಬೆತ್ತಲಾಗಿದ್ದ ಮಹಿಳೆಯೊಬ್ಬರ ವೀಡಿಯೋಗೆ ನಟಿ ರಶ್ಮಿಕಾ ಅವರ ಮುಖ ಸೇರಿಸಿ ಡೀಪ್ಫೇಕ್ ವೀಡಿಯೋ ಮಾಡಲಾಗಿತ್ತು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ಸೇರಿ ಖ್ಯಾತ ನಟರು ಸಹ ಆಕ್ರೋಶ ವ್ಯಕ್ತಪಡಿಸಿದ್ದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ದೆಹಲಿ ಮಹಿಳಾ ಆಯೋಗ ಕೂಡ ಕ್ರಮಕೈಗೊಳ್ಳುವಂತೆ ಒತ್ತಾಯಿಸಿತ್ತು.
ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವೀಡಿಯೋ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ ಎಂಬ ಮಾಧ್ಯಮ ವರದಿಗಳ ಕುರಿತು ದೆಹಲಿ ಮಹಿಳಾ ಆಯೋಗವು ಸುಮೊಟೊ ಅರಿವು ತೆಗೆದುಕೊಂಡಿದೆ. ವರದಿಯ ಪ್ರಕಾರ, ನಟಿ ಈ ವಿಷಯದಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಆಕೆಯ ಚಿತ್ರವನ್ನು ಅಕ್ರಮವಾಗಿ ಮಾರ್ಫಿಂಗ್ ಮಾಡಲಾಗಿದೆ ಎಂದು ಆಯೋಗ ತಿಳಿಸಿತ್ತು. ಇದನ್ನೂ ಓದಿ: ರಶ್ಮಿಕಾ ಡೀಪ್ ಫೇಕ್ ವಿಡಿಯೋಗೆ ವಿಜಯ್ ದೇವರಕೊಂಡ ಕಿಡಿ
ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ. ನವೆಂಬರ್ 17 ರೊಳಗೆ ಆರೋಪಿಗಳ ವಿವರಗಳೊಂದಿಗೆ ಎಫ್ಐಆರ್ ಪ್ರತಿಯನ್ನು ನೀಡಬೇಕು. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ದಯವಿಟ್ಟು ಈ ವಿಷಯದಲ್ಲಿ ದಾಖಲಾಗಿರುವ ಎಫ್ಐಆರ್ನ ಪ್ರತಿಯನ್ನು ಒದಗಿಸಿ ಎಂದು ಆಯೋಗ ಕೇಳಿದೆ.