ದೆಹಲಿಯಲ್ಲಿ ಖಾಸಗಿ ಶಾಲೆಗಳ ಫೀಸ್ ನಿಯಂತ್ರಣಕ್ಕೆ ಮುಂದಾದ ಸರ್ಕಾರ – ಇನ್ಮುಂದೆ ಶುಲ್ಕ ಏರಿಕೆಗೆ ಅನುಮತಿ ಕಡ್ಡಾಯ

Public TV
2 Min Read

ನವದೆಹಲಿ: ಖಾಸಗಿ ಶಾಲೆಗಳ (Private School) ಶುಲ್ಕ ಹೆಚ್ಚಳಕ್ಕೆ ಬ್ರೇಕ್‌ ಹಾಕಲು ದೆಹಲಿ ಸರ್ಕಾರ ಮುಂದಾಗಿದೆ. ಶಾಲಾ ಶಿಕ್ಷಣ ಮಸೂದೆ 2025ನ್ನು (Delhi School Education Bill 2025) ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದು, ಶುಲ್ಕ ಹೆಚ್ಚಳಕ್ಕೆ ಸರ್ಕಾರದ ಒಪ್ಪಿಗೆ ಕಡ್ಡಾಯವಾಗಿದೆ. ನಾಲ್ಕು ಗಂಟೆಗಳ ಚರ್ಚೆಯ ಬಳಿಕ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ವೇಳೆ ಎಎಪಿಯಿಂದ ಬಂದ ಎಂಟು ತಿದ್ದುಪಡಿಗಳ ಸಲಹೆಯನ್ನು ತಿರಸ್ಕರಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ರಣ ಮಳೆಗೆ ಕುಸಿದ ಗೋಡೆ – ಇಬ್ಬರು ಮಕ್ಕಳು ಸೇರಿ 7 ಮಂದಿ ದಾರುಣ ಸಾವು

ಈ ಮಸೂದೆಯಿಂದ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಬೀಳಲಿದೆ. ಇದು ಪೋಷಕರಿಗೆ ಹೊರೆಯನ್ನು ಕಡಿಮೆ ಮಾಡಲಿದೆ. ಇನ್ನುಮುಂದೆ ಸರ್ಕಾರದ ಅನುಮತಿಯಿಲ್ಲದೇ ಯಾವುದೇ ಶಾಲೆ ಶುಲ್ಕವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಆಶಿಶ್ ಸೂದ್ ಹೇಳಿದ್ದಾರೆ.

ಈ ಹಿಂದೆ ಸರ್ಕಾರದಿಂದ ಹಂಚಿಕೆಯಾದ ಭೂಮಿಯಲ್ಲಿ ನಿರ್ಮಾಣಗೊಂಡ ಸುಮಾರು 350 ಶಾಲೆಗಳು ಮಾತ್ರ ಶುಲ್ಕ ಪರಿಷ್ಕರಣೆಗೆ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು. ಈಗ ನಗರದ ಎಲ್ಲಾ 1,443 ಖಾಸಗಿ ಅನುದಾನರಹಿತ ಶಾಲೆಗಳಿಗೂ ಈ ನಿಯಮಗಳು ಅನ್ವಯವಾಗುತ್ತದೆ. ಆ ಶಾಲೆ ಸರ್ಕಾರಿ ಭೂಮಿಯಲ್ಲಿರಲಿ ಅಥವಾ ಇಲ್ಲದಿರಲಿ ಅದು ಈ ನಿಯಮಕ್ಕೆ ಒಳಪಡುತ್ತದೆ ಎಂದು ಅವರು ತಿಳಿಸಿದ್ದಾರೆ.

4 ಗಂಟೆಗಳ ಕಾಲ ನಡೆದ ತೀವ್ರ ಚರ್ಚೆ
ದೆಹಲಿ ವಿಧಾನಸಭೆಯಲ್ಲಿ ಮಸೂದೆಯ ಮೇಲೆ ಸುಮಾರು ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಯಿತು. ಈ ವೇಳೆ, ಸಿಎಂ ರೇಖಾ ಗುಪ್ತಾ (CM  Rekha Gupta ) ಅವರು, ದೆಹಲಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳದ ನಿಯಂತ್ರಣಕ್ಕಾಗಿ ಜನರ 52 ವರ್ಷಗಳ ಕಾಯುವಿಕೆ ಕೊನೆಗೊಂಡಿದೆ ಎಂದರು. ಆದರೆ ಎಎಪಿ, ಕೆಲವು ಖಾಸಗಿ ಶಾಲೆಗಳು ಅನುಕೂಲಕರವಾಗಿದೆ. ಈ ನಿಯಮದಿಂದ ಹಿಂದೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಗಾಳಿಗೆ ತೂರಿದಂತಾಗುತ್ತದೆ ಎಂದು ಆರೋಪಿಸಿತು.

ಮಸೂದೆಯನ್ನು ಈಗ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಸಹಿಗಾಗಿ ಕಳುಹಿಸಲಾಗಿದೆ. ಅನುಮೋದನೆ ದೊರೆತರೆ, ಇದು ದೆಹಲಿಯಾದ್ಯಂತ ಜಾರಿಗೆ ಬರಲಿದೆ. ಇನ್ನೂ ದೆಹಲಿಯಲ್ಲಿ ಕೋವಿಡ್‌ ಕಾಲದಲ್ಲಿ ಹಲವಾರು ಶಾಲೆಗಳು ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿ ಶುಲ್ಕವನ್ನು ಹೆಚ್ಚಿಸಿದ್ದವು ಎಂದು ವರದಿಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರದಲ್ಲಿ ಭಾರತ ಪರಾಕ್ರಮ – ಪಾಕ್‌ನ 6 ಯುದ್ಧ ವಿಮಾನಗಳು ಉಡೀಸ್‌; ವಾಯುಪಡೆ ಮುಖ್ಯಸ್ಥ

Share This Article