ಮತ್ತಷ್ಟು ಆತಂಕಕ್ಕೆ ಕಾರಣವಾಗ್ತಿದೆ ನಿಜಾಮುದ್ದೀನ್ ಜಮಾತ್ ಪ್ರಕರಣ

Public TV
1 Min Read

ನವದೆಹಲಿ: ದೆಹಲಿಯ ನಿಜಾಮುದ್ದೀನ್ ತಬ್ಲಘಿ ಜಮಾತ್ ಪ್ರಕರಣ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಜಮಾತ್ ನಲ್ಲಿ ದಕ್ಷಿಣ ಭಾರತದವರೇ ಜನರು ಹೆಚ್ಚು ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಮರ್ಕಜ್‍ನಲ್ಲಿದ್ದ ಜನರನ್ನು ತಪಾಸಣೆ ಒಳಪಡಿಸಿ ಸ್ಥಳಾಂತರ ಮಾಡುವ ಕೆಲಸ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಈ ಜಮಾತ್ ನಲ್ಲಿ ಭಾಗಿಯಾಗಿದ್ದ 2,137 ಜನರನ್ನು ಗುರುತಿಸಲಾಗಿದೆ. ಈ ಪೈಕಿ 1,339 ಜನರನ್ನು ಸ್ಕ್ರೀನಿಂಗ್ ಮಾಡಿದ್ದು ದೆಹಲಿಯ ಲೋಕನಾಯಕ್, ಏಮ್ಸ್, ಆರ್ ಜಿಎಸ್‍ಎಸ್, ಜಿಟಿಬಿ ಮತ್ತು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ ಗೆ ಶಿಫ್ಟ್ ಮಾಡಲಾಗಿದೆ. ಇವರೆಲ್ಲರ ಸ್ಯಾಂಪಲ್ ಗಳನ್ನ ಪಡೆದು ಲ್ಯಾಬ್ ಗಳಿಗೆ ಕಳುಹಿಸಿದ್ದು ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಈ ಜಮಾತ್ ನಲ್ಲಿ ಮಧ್ಯಪ್ರದೇಶದಿಂದ 107, ತೆಲಂಗಾಣದಿಂದ 15 , ಮೇಘಾಲಯದಿಂದ 7, ತಮಿಳುನಾಡಿನಿಂದ 1500 ಜನರು ಭಾಗಿಯಾಗಿದ್ದರು. ಈ ಪೈಕಿ ತಮಿಳುನಾಡಿಗೆ 1,130 ಮಂದಿ ವಾಪಸ್ ಆಗಿದ್ದು, ಐವರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸುಮಾರು 50 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕರ್ನಾಟಕದಿಂದಲೂ ಸುಮಾರು 300 ಮಂದಿ ಇಲ್ಲಿ ಭಾಗಿಯಾಗಿದ್ದರು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದು, ಆರಂಭದಲ್ಲಿ 53 ಜನರು ಎನ್ನಲಾಗಿತ್ತು.

ಬೀದರ್, ಕಲಬುರಗಿ, ಧಾರವಾಡ, ಬೆಂಗಳೂರು ಸೇರಿ ಹಲವು ನಗರಗಳಿಂದ ಜನರು ಜಮಾತ್ ಗೆ ತೆರಳಿದ್ದರು. ಈಗಾಗಲೇ 13 ಮಂದಿಯನ್ನು ತಪಾಸಣೆಗೆ ಒಳಪಡಿಸಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಎಲ್ಲ ಬೆಳವಣಿಗಳ ನಡುವೆ ನಾವು ಮರ್ಕಜ್‍ನಿಂದ ಸ್ಥಳಾಂತರಕ್ಕೆ ಮೊದಲೇ ಮನವಿ ಮಾಡಿದ್ದೇವೆ. ಆದರೆ ಸರ್ಕಾರ ನಮ್ಮನ್ನು ಸ್ಥಳಾಂತರ ಮಾಡಿರಲಿಲ್ಲ ಎಂದು ಮರ್ಕಜ್ ಆಡಳಿತ ಮಂಡಳಿ ಆರೋಪಿಸಿದೆ. ಇದರ ಬೆನ್ನೆಲ್ಲೇ ಇಡೀ ಪ್ರಕರಣಕ್ಕೆ ಕಾರಣಾರಾದ ನಿಜಾಮುದ್ದೀನ್ ಮಸೀದಿ ಮೌಲ್ವಿ ಮೌಲಾನಾ ಸಾದ್ ವಿರುದ್ಧ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *