ನವದೆಹಲಿ: ಹಳೆಯ ಅಕ್ರಮ ಸಂಬಂಧದ ಬಗ್ಗೆ ತಿಳಿದು ತಾಯಿಯ ಮೇಲೆಯೇ ಹೆತ್ತ ಮಗನೇ ಎರಡು ಬಾರಿ ಅತ್ಯಾಚಾರ ಎಸಗಿದ ಘಟನೆ ದೆಹಲಿಯಲ್ಲಿ (Dehli) ನಡೆದಿದೆ. ಕೃತ್ಯ ಎಸಗಿದ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ.
ಎಂಡಿ ಫಿರೋಜ್ ಅಲಿಯಾಸ್ ಸುಹೇಲ್ (29) ಬಂಧಿತ ಆರೋಪಿಯಾಗಿದ್ದು, ಸಂತ್ರಸ್ತೆಯ ಮಗಳು ದೂರು ದಾಖಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.ಇದನ್ನೂ ಓದಿ: ಬಿಜೆಪಿಗರ ರ‍್ಯಾಲಿ ಧರ್ಮಸ್ಥಳದ ಪರ, ನ್ಯಾಯದ ಪರ ಅಲ್ಲ – ಡಿಕೆಶಿ
ದೂರಿನಲ್ಲಿ ಏನಿದೆ?
ದೂರಿನ ಪ್ರಕಾರ, ಜು.25ರಂದು ಸಂತ್ರಸ್ತೆ, ಆಕೆಯ ಪತಿ (72) ಹಾಗೂ ಮಗಳು ಮೂವರು ತೀರ್ಥಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ (Saudi Arabia) ತೆರಳಿದ್ದರು. ಈ ವೇಳೆ ಆರೋಪಿ ತನ್ನ ತಂದೆಗೆ ಕರೆ ಮಾಡಿ, ಅಮ್ಮನಿಗೆ ಕೆಟ್ಟ ಸ್ವಭಾವವಿದೆ. ನೀವು ಕೂಡಲೇ ಅಲ್ಲಿಂದ ಹಿಂದಿರುಗಿ ಬಂದು ಅಮ್ಮನಿಗೆ ವಿಚ್ಛೇದನ ನೀಡಿ ಎಂದು ಒತ್ತಾಯಿಸಿದ್ದ. ಜೊತೆಗೆ ಹಲವು ಬಾರಿ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.
ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ, ಆ.11ರಂದು ತೀರ್ಥಯಾತ್ರೆ ಮುಗಿಸಿ ಮನೆಗೆ ವಾಪಸ್ಸಾಗಿದ್ದ ತಾಯಿಯ ಮೇಲೆ ಆರೋಪಿ ಹಲ್ಲೆ ನಡೆಸಿದ್ದ. ಇದರಿಂದ ಭಯಭೀತರಾದ ತಾಯಿ ಹಿರಿಯ ಮಗಳ ಮನೆಗೆ ತೆರಳಿದ್ದರು. ಸ್ವಲ್ಪ ದಿನಗಳ ಬಳಿಕ ಮತ್ತೆ ತಮ್ಮ ಮನೆಗೆ ಮರಳಿದ್ದರು. ಆಗ ಆರೋಪಿ ನಿಮ್ಮ ಜೊತೆ ಮಾತನಾಡಬೇಕು ಎಂದು ಹೇಳಿ ತಾಯಿಯನ್ನು ಕೋಣೆಗೆ ಕರೆದುಕೊಂಡು ಹೋಗಿದ್ದ. ಈ ಸಮಯದಲ್ಲಿ ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಿ, ಚಾಕು ಮತ್ತು ಕತ್ತರಿಯಿಂದ ಬೆದರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಸಂತ್ರಸ್ತೆ ಪ್ರಾರಂಭದಲ್ಲಿ ಯಾರಿಗೂ ಹೇಳಿರಲಿಲ್ಲ. ಬಳಿಕ ಭಯದಿಂದ ಮಗಳಿಗೆ ವಿಷಯ ತಿಳಿಸಿ, ಆಕೆಯ ಜೊತೆಗೆ ಮಲಗಲು ಶುರು ಮಾಡಿದ್ದಳು. ಆದರೆ ಆ.14ರಂದು ಆರೋಪಿ ತನ್ನ ತಾಯಿ ಮೇಲೆ ಮತ್ತೆ ಅತ್ಯಾಚಾರ ಎಸಗಿದ್ದ. ನಾನು ನಿನ್ನ ತಾಯಿ ಎಂದು ಬೇಡಿಕೊಂಡರೂ ಕೂಡ ಬಿಡದೇ, ನಿನ್ನ ಕೆಟ್ಟ ಸ್ವಭಾವಕ್ಕೆ ಇದು ಶಿಕ್ಷೆ ಎಂದು ಹೇಳಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: Video Viral | ಸ್ವಾತಂತ್ರ‍್ಯ ದಿನಾಚರಣೆಯಂದು ಅಂಚೆ ಕಚೇರಿಯಲ್ಲಿ ಭರ್ಜರಿ ಬಾಡೂಟ; ಕ್ರಮಕ್ಕೆ ಆಗ್ರಹ