ಸಿಗರೇಟ್ ಸೇದೋದನ್ನ ಬಿಡು ಎಂದ ತಮ್ಮನನ್ನ ಕೊಂದ ಅಣ್ಣ

Public TV
1 Min Read

ನವದೆಹಲಿ: ಸ್ಮೋಕ್ ಮಾಡುವುದನ್ನು ಬಿಡುವಂತೆ ಸಲಹೆ ನೀಡಲು ಹೋಗಿದ್ದ ತಮ್ಮನನ್ನೆ ಅಣ್ಣನೊಬ್ಬ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸತ್ಯದೇವ ಕುಮಾರ್ (25) ಮೃತ ದುರ್ದೈವಿ. ಶಿಶುಪಾಲ್ ಕುಮಾರ್ ಕೊಲೆ ಮಾಡಿದ ಆರೋಪಿ. ಶಿಶುಪಾಲ್ ನಿತ್ಯವೂ ಮನೆಯಲ್ಲಿ ಸ್ಮೋಕ್ ಮಾಡುತ್ತಿದ್ದನು. ಇದರಿಂದಾಗಿ ಕುಟುಂಬದ ಸದಸ್ಯರಿಗೆ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಸತ್ಯದೇವ ಅಣ್ಣನಿಗೆ ಮೊದಲಿನಿಂದಲೂ ಸ್ಮೋಕ್ ಮಾಡದಂತೆ ಸಲಹೆ ನೀಡುತ್ತಿದ್ದರು.

ನಡೆದದ್ದು ಏನು?
ಬುಧವಾರ ಮಧ್ಯಾಹ್ನ 2.30 ಗಂಟೆಗೆ ಶಿಶುಪಾಲ್ ತನ್ನ ರೂಮ್‍ನಲ್ಲಿ ಸಿಗರೇಟ್ ಹಿಡಿದು ಕುಳಿತ್ತಿದ್ದ. ಇದನ್ನು ನೋಡಿದ ಸತ್ಯದೇವ ಶಿಶುಪಾಲ್‍ಗೆ ಸಲಹೆ ನೀಡಲು ಮುಂದಾದರು. ಇದಕ್ಕೆ ಶಿಶುಪಾಲ್ ಪ್ರತಿರೋಧ ವ್ಯಕ್ತಪಡಿಸಿದ್ದು, ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಶಿಶುಪಾಲ್ ಮದ್ಯ ಸೇವನೆ ಕೂಡಾ ಮಾಡಿದ್ದರಿಂದ ಕೋಪದಲ್ಲಿ ಶೂ ಲೇಸ್ ತಗೆದುಕೊಂಡು ಸತ್ಯದೇವ ಕುತ್ತಿಗೆಗೆ ಬಿಗಿದ್ದಿದ್ದಾನೆ. ಅಸ್ವಸ್ತಗೊಂಡ ಸತ್ಯದೇವ ಜ್ಞಾನತಪ್ಪಿ ಕೆಳಗೆ ಬಿದ್ದಿದ್ದಾರೆ. ಗಾಬರಿಗೊಂಡ ಶಿಶುಕುಮಾರ್ ತಮ್ಮನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದನು. ಚಿಕಿತ್ಸೆ ಫಲಕಾರಿಯಾಗದೆ ಸತ್ಯದೇವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಶಿಶುಪಾಲ್ ತನ್ನ ತಂದೆ ಹಾಗೂ ನೆರೆಹೊರೆಯವರಿಗೆ ಇದು ಸಹಜ ಸಾವು ಎನ್ನುವಂತೆ ನಟಿಸಿದ್ದನು.

ಪ್ರಕರಣದ ಕುರಿತು ಆಸ್ಪತ್ರೆ ಅಧಿಕಾರಿಗಳು ಕೊಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಸ್ಪತ್ರೆಗೆ ಬಂದ ಪಟೇಲ್ ನಗರ ಠಾಣೆಯ ಎಸಿಪಿ ರೋಹಿತ್ ಸಿಂಗ್ ಅವರು, ಪ್ರಕರಣ ದಾಖಲಿಸಿಕೊಂಡು ಮರುಣೋತ್ತರ ಪರೀಕ್ಷೆಗೆ ಆದೇಶ ನೀಡಿದ್ದರು.

ಮರುಣೋತ್ತರ ಪರೀಕ್ಷೆಯ ಫಲಿತಾಂಶದಲ್ಲಿ ಸತ್ಯದೇವ ಸಾವು ಸಹಜವಲ್ಲ, ಕೊಲೆ ಎನ್ನಲಾಗಿತ್ತು. ಇದರಿಂದ ತನಿಖೆ ಚುರುಕುಗೊಳಿಸಿದ ಪೊಲೀಸರು ಶಿಶುಪಾಲ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *