Manish Sisodia ಸಿಬಿಐ ಕಸ್ಟಡಿ ವಿಸ್ತರಣೆ – ಮಾ.10 ರಂದು ಜಾಮೀನು ಅರ್ಜಿ ವಿಚಾರಣೆ

Public TV
1 Min Read

ನವದೆಹಲಿ: ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ (Manish Sisodia) ಕಸ್ಟಡಿಯನ್ನು ಮತ್ತೆರಡು ದಿನಕ್ಕೆ ಸಿಬಿಐ (CBI) ವಿಶೇಷ ನ್ಯಾಯಲಯ ವಿಸ್ತರಿಸಿದೆ. ಹೊಸ ಮದ್ಯ ನೀತಿಯಲ್ಲಿ (Delhi Liquor Scam Case) ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾದ ಮನೀಶ್ ಸಿಸೋಡಿಯಾ ವಿಚಾರಣೆ ಇನ್ನೂ ಬಾಕಿ ಇದೆ ಎಂದು ಸಿಬಿಐ ಪರ ವಕೀಲರು ಮನವಿ ಮಾಡಿದ ಹಿನ್ನೆಲೆ ಕಸ್ಟಡಿ ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ.

ಕಳೆದ ಭಾನುವಾರ ಬಂಧನಕ್ಕೊಳಗಾದ ಮನೀಶ್ ಸಿಸೋಡಿಯಾ ಕಸ್ಟಡಿ ಅಂತ್ಯವಾದ ಹಿನ್ನೆಲೆ ಅವರನ್ನು ಇಂದು ರೋಸ್ ಅವೆನ್ಯೂ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಸಿಬಿಐ ಪರ ವಾದ ಮಂಡಿಸಿದ ವಕೀಲರು, ಸಿಸೋಡಿಯಾ ವಿಚಾರಣೆಗೆ ಸ್ಪಂದಿಸುತ್ತಿಲ್ಲ. ಸಾಕಷ್ಟು ದಾಖಲೆಗಳು ಕಾಣೆಯಾಗಿವೆ. ಹಲವು ಆರೋಪಿಗಳ ಮೇಲೆ ಅವರು ನಿಯಂತ್ರಣ ಹೊಂದಿದ್ದಾರೆ. ವಿಚಾರಣೆಗಾಗಿ ಮೂರು ದಿನಗಳ ಕಸ್ಟಡಿ ಅಗತ್ಯ ಇದೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ – CBIನಿಂದ ಡಿಸಿಎಂ ಮನೀಶ್‌ ಸಿಸೋಡಿಯಾ ಅರೆಸ್ಟ್

ಇದಕ್ಕೆ ಪ್ರತಿವಾದ ಮಂಡಿಸಿದ ಮನೀಶ್ ಸಿಸೋಡಿಯಾ ಪರ ವಕೀಲರು, ಈಗಾಗಲೇ ನಾವು ಜಾಮೀನು ಅರ್ಜಿ ಸಲ್ಲಿಸಿದ್ದೇವೆ. ಅದರ ವಿಚಾರಣೆ ನಡೆಯಬೇಕು. ಸಿಬಿಐ ಯಾವುದೇ ಹೊಸ ವಿಷಯಗಳನ್ನು ಆಧರಿಸಿ ವಿಚಾರಣೆ ನಡೆಸುತ್ತಿಲ್ಲ. ನಿತ್ಯ 8-9 ಗಂಟೆಗಳ ವಿಚಾರಣೆಯಲ್ಲಿ ಕೇಳಿದ ಪ್ರಶ್ನೆಗಳನ್ನೆ ಮತ್ತೆ ಮತ್ತೆ ಕೇಳಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದರು‌.

ವಾದ ಪ್ರತಿವಾದ ಆಲಿಸಿದ ನ್ಯಾ. ಎಂ.ಕೆ.ನಾಗಪಾಲ್, ಜಾಮೀನು ಅರ್ಜಿಯನ್ನು ಮಾರ್ಚ್ 10 ರಂದು ವಿಚಾರಣೆ ನಡೆಸಲಾಗುವುದು. ಎರಡು ದಿನಗಳ ಕಸ್ಟಡಿಯನ್ನು ವಿಸ್ತರಿಸಲಾಗುವುದು ಎಂದು ಆದೇಶಿಸಿದರು. ಈ ನಡುವೆ ಪ್ರತಿ 24 ಗಂಟೆಗೊಮ್ಮೆ ಮನೀಶ್ ಸಿಸೋಡಿಯಾ ಆರೋಗ್ಯ ತಪಾಸಣೆ ಮಾಡುವಂತೆಯೂ ಅವರು ಸಿಬಿಐ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದನ್ನೂ ಓದಿ: ಪಿಎಂ ತನಿಖೆಯಲ್ಲಿ ಕ್ಲೀನ್‌ಚಿಟ್‌ ಸಿಕ್ಕಿದೆ; ಮನೆ, ಬ್ಯಾಂಕ್‌ ಲಾಕರ್‌ನಲ್ಲಿ CBIಗೆ ಏನೂ ಸಿಕ್ಕಿಲ್ಲ: ಸಿಸೋಡಿಯಾ

Share This Article
Leave a Comment

Leave a Reply

Your email address will not be published. Required fields are marked *