ಮೃತಪಟ್ಟಿದ್ದಾಳೆಂದು ಭಾವಿಸಿದ್ದ ಪತ್ನಿಯನ್ನು 9 ವರ್ಷಗಳ ಬಳಿಕ ಕಂಡು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತ ಪತಿ

Public TV
3 Min Read

ಮಡಿಕೇರಿ: ಒಂಭತ್ತು ವರ್ಷದ ಹಿಂದೆ ಪತ್ನಿ (Wife) ಮೃತಪಟ್ಟಿದ್ದಾಳೆ ಎಂದುಕೊಂಡಿದ್ದ ಪತಿಗೆ ಆಕೆ ಬದುಕಿದ್ದಾಳೆ ಎಂದು ತಿಳಿದು ಆಕೆಗಾಗಿ ಸಾವಿರಾರು ಕಿ.ಮೀ ದೂರದಿಂದ ಹುಡುಕಿಕೊಂಡು ಬಂದು ಪತ್ನಿಯನ್ನು ಬಿಗಿದಪ್ಪಿಕೊಂಡ ಅಪೂರ್ವವಾದ ಸಂಗಮಕ್ಕೆ ಮಂಜಿನ ನಗರಿ ಮಡಿಕೇರಿ ಸಾಕ್ಷಿಯಾಗಿದೆ.

ಕೊಡಗು (Kodagu) ಜಿಲ್ಲೆಯ ಮಡಿಕೇರಿ (Madikeri) ತನಲ್ ಎಂಬ ಸಂಸ್ಥೆ ಇವರಿಬ್ಬರ ಅಪೂರ್ವ ಸಂಗಮಕ್ಕೆ ಕಾರಣವಾಗಿದೆ. ತನ್ನವರನ್ನ ಕಂಡು ಸಂತಸ ಪಡುತ್ತಿರುವವಳ ಹೆಸರು ದರ್ಶಿನಿ. ಈಕೆಯದ್ದು ಒಂದು ಸುಂದರ ಕುಟುಂಬ ಪತಿ ಹಾಗೂ 5 ಮಕ್ಕಳು. ಆದರೆ ದರ್ಶಿನಿ ಮಾತ್ರ ಕೊಂಚ ಮಾನಸಿಕ ಅಸ್ವಸ್ಥರಾಗಿದ್ದರು. ಹೀಗಾಗಿ ಈಕೆ 2013ರಲ್ಲಿ ದೆಹಲಿಯಿಂದ ನಾಪತ್ತೆ ಆಗಿದ್ದಳು. ದರ್ಶಿನಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಪತಿ ಕೆಹರ್ ಸಿಂಗ್ ಆಕೆಗಾಗಿ ಹುಡುಕಾಡಿದ ಊರುಗಳಿಲ್ಲ, ವಿಚಾರಿಸದ ಸಂಬಂಧಿಕರಿಲ್ಲ. ಆದರೂ ಕೂಡ ಎಲ್ಲೂ ಪತ್ನಿಯ ಸುಳಿವೇ ಇರಲಿಲ್ಲ. ಸಾಕಷ್ಟು ವರ್ಷ ಹುಡುಕಿದ ಕೆಹರ್‌ ಸಿಂಗ್‌ ಕೊನೆಗೆ ಆಕೆ ಪತ್ತೆ ಆಗದಿದ್ದರಿಂದ ಕೋವಿಡ್‌ಗೆ ಬಲಿಯಾಗಿದ್ದಾಳೆಂದುಕೊಂಡು ಹುಡುಕುವುದನ್ನು ಬಿಟ್ಟಿದ್ದರು.

ಆದರೆ 9 ವರ್ಷಗಳ ನಂತರ ದರ್ಶನಿ ಬದುಕಿರುವ ವಿಷಯವನ್ನು ಪತಿ ಕೆಹರ್ ಸಿಂಗ್‌ಗೆ ತಿಳಿಸಿದ್ದಾರೆ. ಈ ಸುದ್ದಿಯನ್ನು ಕೇಳಿದ ಕೆಹರ್ ಸಿಂಗ್ 3,000 ಕಿ.ಮೀ ದೂರದ ದೆಹಲಿಯಿಂದ ಕೊಡಗಿನತ್ತ ಬಂದಿದ್ದಾರೆ. ಈ ವೇಳೆ ಬಂದವರೇ ಕೆಹರ್‌ ಸಿಂಗ್‌ ತನ್ನ ಪತ್ನಿಯನ್ನು ಬಿಗಿದಪ್ಪಿ ಮುದ್ದಾಡಿದರು. 9 ವರ್ಷಗಳ ಬಳಿಕ ಭೇಟಿಯಾದ ಇಬ್ಬರು ಒಂದು ಕ್ಷಣ ಭಾವುಕರಾದರು. 9 ವರ್ಷಗಳ ಬಳಿಕ ಕಂಡ ಪತ್ನಿಗೆ ಸಿಹಿ ಕೊಟ್ಟು ಸಂಭ್ರಮಿಸಿದರು. ದೇವರು ಎಲ್ಲಿದ್ದಾನೆಂದು ಹುಡುಕುತ್ತಿದ್ದೆ ಆದ್ರೆ ಇಂದು ಕೊಡಗಿನಲ್ಲಿ ತನಲ್ ಸಂಸ್ಥೆಯಲ್ಲಿ ನನ್ನ ದೇವರನ್ನ ಕಂಡೆ ಅಂತ ಕೆಹರ್‌ ಸಿಂಗ್‌ ಹರ್ಷ ವ್ಯಕ್ತಪಡಿಸಿದರು.

ಘಟನೆಯೇನು?: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದರ್ಶಿನಿ ಎಂಬ ಮಹಿಳೆ ಕಳೆದ 9 ವರ್ಷಗಳ ಹಿಂದೆ ದೂರದ ದೆಹಲಿಯಿಂದ (New Delhi) ನಾಪತ್ತೆಯಾಗಿದ್ದರು. 5 ವರ್ಷಗಳ ಕಾಲ ದೆಹಲಿಯಿಂದ ಸುದೀರ್ಘವಾಗಿ ಎಲ್ಲೆಲ್ಲೋ ಓಡಾಟ ಮಾಡಿಕೊಂಡು ಕಳೆದ 2018ರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಈ ಮಹಿಳೆ ಆಗಮಿಸಿದ್ದಾಳೆ.

ಕುಶಾಲನಗರದಲ್ಲಿ ಹಲವು ದಿನಗಳಿಂದ ಅಲ್ಲಲ್ಲಿ ಹರಿದ ರವಿಕೆ ಸೀರೆ ಕೆದರಿದ ಕೂದಲು ಮಾನಸಿಕ ಅಸ್ವಸ್ಥೆಯಂತೆ ಏನನ್ನೋ ಬಡಬಡಿಸುತ್ತಾ ರಸ್ತೆ ಬದಿಗಳಲ್ಲಿ ತಿರುಗಾಡುತ್ತಿದ್ದ ಆಕೆಯನ್ನು ಅಲ್ಲಿನ ಪೋಲಿಸರು ವಿಚಾರಿಸಿದಾಗ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾರೆ. ಆದರೆ ಸರಿಯಾದ ಮಾಹಿತಿ ಸಿಗದೇ ಮಡಿಕೇರಿಯ ತನಲ್ ವ್ಯವಸ್ಥಾಪಕರಾದ ಮುಹಮ್ಮದ್ ಮುಸ್ತಾಫ ಅವರನ್ನು ಸಂಪರ್ಕಿಸಿ ಆಶ್ರಮಕ್ಕೆ ಸೇರಿಸಲಾಗಿತ್ತು.

ಮುಂದೆ ಅವರಿಗೆ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದ್ದು ಈ ತನಲ್ ಆಶ್ರಮ. ನಂತರ ತನಲ್ ಆಶ್ರಮದಿಂದ ಮತ್ತೆ ಆ ಮಹಿಳೆಯ ಕುಟುಂಬದೊಂದಿಗೆ ಮರು ಸೇರಿಸುವ ಕುರಿತು ಚಿಂತನೆ ನಡೆದಿತ್ತು. ಕಳೆದ 6 ತಿಂಗಳಿನಿಂದ ಅವರ ವಿಳಾಸವನ್ನು ಹುಡುಕುತ್ತಾ ದೆಹಲಿ ಮತ್ತು ಹರಿಯಾಣ ಪೊಲೀಸರನ್ನು ಸಂಪರ್ಕಿಸಿ ಈಗ ಅವರ ಪತಿ (Husband) ಕೆ.ಆರ್ ಸಿಂಗ್‌ರೊಂದಿಗೆ ದರ್ಶಿನಿಯನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಟಿಕೆಟ್ ವಿಚಾರದಲ್ಲಿ ಕಚ್ಚಾಟ – KPCC ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ

ಒಟ್ಟಿನಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ತನ್ನಿಂದ ದೂರವಿದ್ದ ಹೆಂಡತಿಯನ್ನು 9 ವರ್ಷಗಳ ಬಳಿಕ ಕಂಡ ಪತಿ ಕೆಹರ್‌ ಸಿಂಗ್‌ ಕಣ್ಣಿನಲ್ಲಿ ನೀರು ತುಂಬಿ ಕೊರಳು ಬಿಗಿದು ಹೋಗಿತ್ತು. ತಾನೇನು ಮಾತನಾಡಲಾರದೆ ಕೇವಲ ತನ್ನ ಪತ್ನಿಯ ತಲೆಯನ್ನು ಸವರಿ ಅಪ್ಪಿಕೊಂಡು ಮುದ್ದು ಮಾಡಿದರು. ತನ್ನ ಪತಿಯನ್ನು ಕಂಡ ದರ್ಶಿನಿ ಕೂಡ ಖುಷಿಯಿಂದಲೇ ತನ್ನ ಊರಿಗೆ ಹೊರಟಿದ್ದರು. ಅನಾಥಾಶ್ರಮದಲ್ಲಿದ್ದ ಇತರ ವೃದ್ಧೆಯರು, ಮಹಿಳೆಯರು ದರ್ಶಿನಿಗೆ ಕೈಬೀಸಿ ಹೋಗಿ ಬಾ ಚೆನ್ನಾಗಿರು ಎಂದು ಹಾರೈಸುತ್ತಿದ್ದ ದೃಶ್ಯವೂ ಹೃದಯಸ್ಪರ್ಶಿಯಾಗಿತ್ತು. ಇದನ್ನೂ ಓದಿ: ಪಾದಯಾತ್ರೆಯನ್ನು ಬುಲೆಟ್ ಪ್ರೂಫ್ ವಾಹನದಲ್ಲಿ ಮಾಡೋಕ್ಕಾಗಲ್ಲ: ನಿಯಮ ಉಲ್ಲಂಘನೆ ಆರೋಪಕ್ಕೆ ರಾಗಾ ತಿರುಗೇಟು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *