ಶಾರ್ಟ್‌ಕಟ್‌ ರಾಜಕೀಯಕ್ಕೆ ಜನರು ಶಾರ್ಟ್ ಸರ್ಕ್ಯೂಟ್ ನೀಡಿದ್ದಾರೆ – ಇದು ವಿಕಾಸದ ಗೆಲುವು ಎಂದ ಮೋದಿ

Public TV
2 Min Read

ನವದೆಹಲಿ: ಶಾರ್ಟ್‌ಕಟ್‌ ರಾಜಕೀಯಕ್ಕೆ ಜನರು ಶಾರ್ಟ್ ಸರ್ಕ್ಯೂಟ್ ನೀಡಿದ್ದಾರೆ. ದೆಹಲಿ ಮಾಲೀಕರಾಗಲು ಹೊರಟವರಿಗೆ ಬುದ್ದಿ‌ ಕಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

ದೆಹಲಿ ಚುನಾವಣೆಯಲ್ಲಿ (Delhi Election) ಜಯಗಳಿಸಿದ ನಂತರ ಬಿಜೆಪಿ (BJP) ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೆಹಲಿ ಜನರು ನನಗೆ ಯಾವತ್ತೂ ನಿರಾಶೆ ಮಾಡುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ  ಏಳಕ್ಕೆ ಏಳು ಸ್ಥಾನಗಳನ್ನು ನೀಡಿದ್ದಾರೆ. ದೆಹಲಿ ಜನಾದೇಶ ಸ್ಪಷ್ಟವಾಗಿದ್ದು ಇದು ಅಭಿವೃದ್ಧಿ , ದೂರದೃಷ್ಟಿ ಮತ್ತು ವಿಕಾಸದ ಗೆಲುವು ಎಂದು ಬಣ್ಣಿಸಿದರು.

 

 

ಒಂದು ದಶಕದ ಬಳಿಕ ಆಪ್‌ನಿಂದ ದೆಹಲಿ ಮುಕ್ತವಾಗಿದೆ. ಎಲ್ಲಾ ಕಾರ್ಯಕರ್ತರು ಈ ಗೆಲುವಿಗೆ ಹಕ್ಕುದಾರರು. ಈ ಗೆಲುವಿಗಾಗಿ ನಾನು ಬಿಜೆಪಿಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೆಹಲಿಯ ಅಸಲಿ ಮಾಲೀಕರು ದೆಹಲಿ ಜನರು ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.

ದೆಹಲಿಯಲ್ಲಿ ಸೇವೆಯ ಅವಕಾಶ ನೀಡುವಂತೆ ದೆಹಲಿ ಜನರಿಗೆ ನಾನು ಒಂದು ಪತ್ರ‌ ಕಳುಹಿಸಿದ್ದೆ. ಜನರು ಈಗ ನಮಗೆ ಅಭಿವೃದ್ಧಿ ಮಾಡಲು ಅವಕಾಶ ನೀಡಿದ್ದಾರೆ. ಇದಕ್ಕಾಗಿ ನಾನು ತಲೆ ಬಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಹೃದಯ ತುಂಬಿ ಜನರು ಪ್ರೀತಿ ನೀಡಿದ್ದಾರೆ. ಈ ಪ್ರೀತಿಯನ್ನು ನೂರು ಪಟ್ಟು ಸೇರಿಸಿ ಅಭಿವೃದ್ಧಿ ಮೂಲಕ ವಾಪಸ್ ನೀಡುತ್ತೇವೆ. ವೇಗವಾಗಿ ಅಭಿವೃದ್ಧಿ ಮಾಡಿ ಈ ಋಣ ತೀರಿಸುತ್ತೇವೆ.ರಾಜಕೀಯದಲ್ಲಿ ಸುಳ್ಳು ಮತ್ತು ಮೋಸಕ್ಕೆ ಸ್ಥಳವಿಲ್ಲ ಎಂಬುದನ್ನು ಈ ಜನಾದೇಶ ತಿಳಿಸಿದೆ ಎಂದು ಬಣ್ಣಿಸಿದರು.

 

Share This Article