Delhi Coaching Centre Flooded: ಐಎಎಸ್ ಆಕಾಂಕ್ಷಿಗಳ ಸಾವು ಪ್ರಕರಣ – ಲೋಕಸಭೆಯಲ್ಲಿ ಚರ್ಚೆ

Public TV
2 Min Read

ನವದೆಹಲಿ: ದೆಹಲಿಯ ರಾವ್ಸ್ ಐಎಎಸ್ ಕೋಚಿಂಗ್ ಸೆಂಟರ್ (IAS Coaching Centre) ನೆಲ ಮಾಳಿಗೆಗೆ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣವನ್ನು ಸೋಮವಾರ ಲೋಕಸಭೆಯಲ್ಲಿ (Lok Sabha) ಚರ್ಚಿಸಲಾಯಿತು. ಸಂಸದರಾದ ಶಶಿ ತರೂರ್, ಅಖಿಲೇಶ್ ಯಾದವ್, ಬಾನ್ಸುರಿ ಸ್ವರಾಜ್ ಸೇರಿ ಹಲವು ಸಂಸದರು ಈ ಬಗ್ಗೆ ಮಾತನಾಡಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಸಂಸದ ಶಶಿ ತರೂರು ಮಾತನಾಡಿ, ಯುಪಿಎಸ್‌ಸಿ ಮೂಲಕ ದೇಶ ಸೇವೆ ಕನಸು ಕಂಡು ವಿದ್ಯಾರ್ಥಿಯನ್ನು ಕಳೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಯುವಕನ ಸಾವಿಗೆ ಏನೇ ನೀಡಿದರೂ ನಷ್ಟ ಭರಿಸಲು ಸಾಧ್ಯವಿಲ್ಲ. ಇದು ನಿಯಮಗಳ ಉಲ್ಲಂಘನೆಯಾಗಿದೆ. ಅಗ್ನಿ ಸುರಕ್ಷತೆ, ಪ್ರವಾಹ ಸುರಕ್ಷತೆ ವಿಚಾರದಲ್ಲಿ ನಿಯಮಗಳ ಉಲ್ಲಂಘನೆ ಹೆಚ್ಚಿದೆ. ಅಧಿಕಾರಿಗಳು ಅನುಮತಿ ನೀಡುವ ಮುನ್ನ ಈ ಬಗ್ಗೆ ಪರಿಶೀಲನೆ ಮಾಡುವುದಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ನಮ್ಮದು ಯಾರಿಗೂ ಕೆಟ್ಟದ್ದು ಬಯಸುವ ವಂಶವಲ್ಲ: ಡಿ.ಕೆ ಸುರೇಶ್

ಅಖಿಲೇಶ್ ಯಾದವ್ ಘಟನೆಯ ಕುರಿತು ಪ್ರತಿಕ್ರಿಯಿಸಿ, ಇದೊಂದು ನೋವಿನ ಘಟನೆ. ಕಟ್ಟಡ ಕಾಮಗಾರಿಗಳಿಗೆ ಅನುಮತಿ ನೀಡುವುದು ಮತ್ತು ಎನ್‌ಒಸಿ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ಘಟನೆಗೆ ಎಲ್ಲರೂ ಹೊಣೆಗಾರರು. ಅವರ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಇದು ಕೇವಲ ಒಂದು ಅಕ್ರಮ ಕಟ್ಟಡದ ಪ್ರಕರಣವಲ್ಲ, ನಾವು ಇದನ್ನು ಉತ್ತರ ಪ್ರದೇಶದಲ್ಲೂ ನೋಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಕೇಂದ್ರದಿಂದ ಅನ್ಯಾಯ, ದೇಶ ವಿಭಜನೆ ಕೂಗು ಮತ್ತೊಮ್ಮೆ ಏಳಬಹುದು: ಡಿಕೆ ಸುರೇಶ್‌

ದೆಹಲಿ ಸರ್ಕಾರದ ಕ್ರಿಮಿನಲ್ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಬಾನ್ಸುರಿ ಸ್ವರಾಜ್ ಆರೋಪಿಸಿದರು. ಮೂವರು ವಿದ್ಯಾರ್ಥಿಗಳ ಸಾವಿಗೆ ದೆಹಲಿಯ ಆಮ್ ಆದ್ಮಿ ಪಕ್ಷದ ಆಡಳಿತದ ಸಂಪೂರ್ಣ ನಿರಾಸಕ್ತಿಯೇ ಕಾರಣ. ಒಂದು ದಶಕದಿಂದ ದೆಹಲಿಯಲ್ಲಿ ಎಎಪಿ ಅಧಿಕಾರ ನಡೆಸುತ್ತಿದೆ. ಆದರೆ ಅದು ಜನರಿಗಾಗಿ ಕೆಲಸ ಮಾಡುತ್ತಿಲ್ಲ. ದೆಹಲಿ ಜಲ ಮಂಡಳಿ ವಿರುದ್ಧ ಸ್ಥಳೀಯ ಶಾಸಕರು, ಕೌನ್ಸಿಲರ್‌ಗಳು ಅಧಿಕಾರಿಗಳಿಗೆ ನಿರಂತರವಾಗಿ ದೂರು ನೀಡುತ್ತಿದ್ದರೂ ಪರಿಗಣಿಸಿಲ್ಲ. ಈ ವಿಷಯದ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸುವಂತೆ ನಾನು ಗೃಹ ಸಚಿವಾಲಯವನ್ನು ಕೋರುತ್ತೇನೆ ಎಂದು ಬಾನ್ಸುರಿ ಹೇಳಿದರು. ಇದನ್ನೂ ಓದಿ: ಕೆಆರ್‌ಎಸ್‌ ಭರ್ತಿ: ಮೂರನೇ ಬಾರಿ ಬಾಗಿನ ಅರ್ಪಿಸಿದ ಸಿಎಂ

ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಒಟ್ಟು ಐದು ಮಂದಿಯನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ. ಈ ಘಟನೆಯಲ್ಲಿ ಯಾರೇ ತಪ್ಪು ಮಾಡಿದರೂ ಬಿಡುವುದಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ ಎಂದು ಡಿಸಿಪಿ ಎಂ.ಹರ್ಷವರ್ಧನ್ ಹೇಳಿದ್ದಾರೆ. ಮೃತ ವಿದ್ಯಾರ್ಥಿಗಳ ಸಾವಿಗೆ ನ್ಯಾಯ ಕೋರಿ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇರೋದು ಹಗರಣಗಳಲ್ಲಿ ಮುಳುಗಿರುವ ಸರ್ಕಾರ: ನಿಖಿಲ್ ಕುಮಾರಸ್ವಾಮಿ

Share This Article