Delhi Budget 2025 | ಇಂದಿನಿಂದ ದೆಹಲಿ ವಿಧಾನಸಭೆ ಅಧಿವೇಶನ – ನಾಳೆ ಬಜೆಟ್ ಮಂಡನೆ

Public TV
1 Min Read

ನವದೆಹಲಿ: ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ (Delhi Budget 2025) ಸೋಮವಾರದಿಂದ (ಇಂದಿನಿಂದ) ಪ್ರಾರಂಭವಾಗಲಿದೆ. ಖೀರ್‌ (ಪಾಯಸ – kheer ceremony) ಸಮಾರಂಭದೊಂದಿಗೆ ಬಜೆಟ್‌ ಅಧಿವೇಶನ ಆರಂಭವಾಗಲಿದೆ.

27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿ ಸರ್ಕಾರ ಮಂಗಳವಾರ ಮೊದಲ ಬಜೆಟ್‌ ಮಂಡಿಸಲಿದೆ. ಮಾರ್ಚ್ 25 ರಂದು ನಡೆಯಲಿರುವ ಅಧಿವೇಶನದಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು 2025-26ನೇ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದಾರೆ.

ಗ್ಯಾರಂಟಿ ಅನುಷ್ಠಾನದ ಬಗ್ಗೆ ನಿರೀಕ್ಷೆ:
ಮೊದಲ ಬಾರಿ ಶಾಸಕಿಯಾದ್ರೂ ಸಿಎಂ ಆಗಿರುವ ರೇಖಾ ಗುಪ್ತಾ (Rekha Gupta) ಅವರು, ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಮಹಿಳೆಯರಿಗೆ ಮಾಸಿಕ 2,500, ವರ್ಷಕ್ಕೆ 2 ಉಚಿತ ಸಿಲಿಂಡರ್‌, ಯುವಕರು, ಕಾರ್ಮಿಕರ ಜೀವನ ಮಟ್ಟ ಸುಧಾರಿಸುವ ಯೋಜನೆಗಳಿಗೆ ಅನುದಾನ ಘೋಷಣೆ ಮಾಡುವ ನಿರೀಕ್ಷೆ ಹೆಚ್ಚಾಗಿದೆ. ಇದರೊಂದಿಗೆ ಆಪ್ ಸರ್ಕಾರದ ಉಚಿತ ಯೋಜನೆಗಳನ್ನು ಮುಂದುವರಿಸುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ. ಜೊತೆಗೆ ಡಿಟಿಸಿ ಕಾರ್ಯವೈಖರಿ ಕುರಿತು ಸಿಎಜಿ ವರದಿಯನ್ನೂ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುಗುತ್ತದೆ ಎಂದು ಹೇಳಲಾಗಿದೆ.

ಬಜೆಟ್‌ ಅಧಿವೇಶನದ ಅವಧಿ ಎಷ್ಟು?
ಮುಂಬರುವ ಹಣಕಾಸು ವರ್ಷದ ಹಣಕಾಸು ನೀತಿಗಳು ಮತ್ತು ಅಭಿವೃದ್ಧಿ ಮಾರ್ಗಸೂಚಿಯನ್ನು ನಿರ್ಧರಿಸಲು ಈ ಅಧಿವೇಶನ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಮಾರ್ಚ್‌ 24ರಿಂದ ಮಾರ್ಚ್‌ 28ರ ವರೆಗೆ ಈ ಅಧಿವೇಶನ ನಡೆಯುತ್ತದೆ. ಅಗತ್ಯವಿದ್ದರೆ ಅವಧಿಯನ್ನು ವಿಸ್ತರಣೆ ಮಾಡಬಹುದು ಎಂದು ವಿಧಾನಸಭೆ ಸ್ಪೀಕರ್ ವಿಜೇಂದ್ರ ಗುಪ್ತಾ ಹೇಳಿದ್ದಾರೆ.

ಮಾರ್ಚ್ ‌26ರಂದು ಸದನದಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯಲಿದ್ದು, ಮಾರ್ಚ್ 27ರಂದು ಮಂಡಿಸಿದ ಬಿಲ್‌ಗಳಿಗೆ ಅನುಮೋದನೆ ಪಡೆಯಲಾಗುತ್ತದೆ. ಮಾರ್ಚ್‌ 28ರಂದು ಖಾಸಗಿ ಮಸೂದೆಗಳು ಹಾಗೂ ನಿರ್ಣಯಗಳ ಮೇಲೆ ಚರ್ಚೆ ನಡೆಯಲಿದೆ. ಹೀಗಾಗಿ ಎಲ್ಲಾ ಸದಸ್ಯರು ಸದನದ ಘನತೆ ಕಾಪಾಡುವಂತೆ ಸ್ಪೀಕರ್‌ ಮನವಿ ಮಾಡಿದ್ದಾರೆ.

10,000 ಸಲಹೆಗಳು:
ದೆಹಲಿ ಬಜೆಟ್‌ಗೆ ಸಂಬಂಧಿಸಿದಂತೆ ವೃತ್ತಿಪರರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಸುಮಾರು 10,000 ಮಂದಿ ಸಲಗೆ ನೀಡಿದ್ದಾರೆ. ಈ ಪೈಕಿ 3,303 ಸಲಹೆಗಳು ಇಮೇಲ್‌ ಮೂಲಕ, 6,982 ಸಲಹೆಗಳನ್ನು ವಾಟ್ಸಪ್‌ ಮೂಲಕ ಸ್ವೀಕರಿಸಲಾಗಿದೆ.

Share This Article