ನವದೆಹಲಿ: ದೆಹಲಿ ಬಾಂಬರ್ ಕಾರು ಸ್ಫೋಟಕ್ಕೂ ಒಂದು ವಾರದ ಮುಂಚೆ ಪುಲ್ವಾಮಾಗೆ ಭೇಟಿ ಕೊಟ್ಟಿರುವುದು ತನಿಖೆಯಿಂದ ಬಯಲಾಗಿದೆ. ಜಮ್ಮು-ಕಾಶ್ಮೀರದಲ್ಲಿರುವ ಪುಲ್ವಾಮಾದ ಸಹೋದರನ ಮನೆಗೆ ಉಗ್ರ ಭೇಟಿ ಕೊಟ್ಟಿದ್ದ.
ಬಾಂಬರ್ ಡಾ. ಉಮರ್ ಮೊಹಮ್ಮದ್ ಅಲಿಯಾಸ್ ಉಮರ್-ಉನ್-ನಬಿ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ‘ಹುತಾತ್ಮ ಕಾರ್ಯಾಚರಣೆಗಳು’ ಎಂದು ಕರೆದಿದ್ದ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊ ಯಾವಾಗ ಹರಿಬಿಡಲಾಯಿತು ಎಂಬುದರ ಜಾಡು ಹಿಡಿದು ಹೊರಟಾಗ ಈ ವಿಚಾರ ಬೆಳಕಿಗೆ ಬಂದಿದೆ.
ನವೆಂಬರ್ 10 ರಂದು ನಬಿ ದಾಳಿ ನಡೆಸುವ ಒಂದು ವಾರದ ಮೊದಲು, ಪುಲ್ವಾಮಾದಲ್ಲಿರುವ ಕುಟುಂಬದ ಮನೆಗೆ ಭೇಟಿ ನೀಡಿದ್ದ. ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ನಬಿ ಕೆಲಸ ಮಾಡುತ್ತಿದ್ದ. ಫರಿದಾಬಾದ್‌ಗೆ ತೆರಳುವ ಮೊದಲು, ನಬಿ ತನ್ನ ಎರಡು ಫೋನ್‌ಗಳಲ್ಲಿ ಒಂದನ್ನು ಸಹೋದರನಿಗೆ ನೀಡಿದ್ದ.
ನವೆಂಬರ್ 7 ರಂದು ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ನಬಿಯ ಸಹೋದ್ಯೋಗಿಗಳಾದ ಡಾ. ಅದೀಲ್ ಅಹ್ಮದ್ ರಾಥರ್ ಮತ್ತು ನವೆಂಬರ್ 9 ರಂದು ಫರಿದಾಬಾದ್‌ನಲ್ಲಿ ಸ್ಫೋಟಕಗಳ ಸಾಗಣೆಗೆ ಸಂಬಂಧಿಸಿದಂತೆ ಡಾ. ಮುಜಮ್ಮಿಲ್ ಶಕೀಲ್ ಅವರನ್ನು ಬಂಧಿಸಲಾಗಿದೆ ಎಂಬುದು ಉಮರ್ ಸಹೋದರನಿಗೂ ತಿಳಿದಿತ್ತು.
ನಬಿಯ ಸಹೋದರ ಗಾಬರಿಗೊಂಡು ಫೋನ್ ಅನ್ನು ಪುಲ್ವಾಮಾದಲ್ಲಿರುವ ಅವರ ಮನೆಯ ಬಳಿಯ ಕೊಳದಲ್ಲಿ ಎಸೆದಿದ್ದ. ತನಿಖಾಧಿಕಾರಿಗಳು ನಬಿ ಬಳಿ ಇದ್ದ ಎರಡು ಫೋನ್‌ಗಳನ್ನು ಪತ್ತೆಹಚ್ಚಲು ಪ್ರಯತ್ನಿಸಿದಾಗ, ಎರಡೂ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು.
ನಂತರ ತನಿಖಾಧಿಕಾರಿಗಳು ಪುಲ್ವಾಮಾದಲ್ಲಿರುವ ನಬಿಯ ಮನೆಗೆ ತಲುಪಿ ವಿಚಾರಣೆ ನಡೆಸಿದ್ದಾರೆ. ದೆಹಲಿ ಬಾಂಬರ್ ತನ್ನ ಸಹೋದರನಿಗೆ ಫೋನ್ ನೀಡಿದ್ದು, ಅದನ್ನು ಕೊಳದಲ್ಲಿ ಎಸೆದಿರುವ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ.
