Delhi Explosion | ಇ-ಮೇಲ್‌ ಡ್ರಾಫ್ಟ್ ಮೂಲಕ ಸಂವಹನ ನಡೆಸುತ್ತಿದ್ದ ಉಗ್ರರು; Dead Drop ಸೀಕ್ರೆಟ್‌ ಏನು?

Public TV
1 Min Read

ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ (Delhi Red Fort Explosion) ಪ್ರಕರಣದ ಕುರಿತು ಒಂದಿಲ್ಲೊಂದು ರೋಚಕ ಸಂಗತಿಗಳು ಹೊರಬೀಳುತ್ತಲೇ ಇವೆ. ಪ್ರಕರಣದ ಆರೋಪಿಗಳಾಗಿರುವ ʻವೈಟ್‌ ಕಾಲರ್‌ʼ ಉಗ್ರರು ಇ-ಮೇಲ್‌ ಡ್ರಾಫ್ಟ್‌ ವಿಧಾನದ ಮೂಲಕ ಸಂವಹನ ನಡೆಸುತ್ತಿದ್ದರು ಅನ್ನೋದು ತನಿಖಾ ಸಂಸ್ಥೆಗಳಿಂದ ಗೊತ್ತಾಗಿದೆ.

ಹೇಗಿತ್ತು ಸಂವಹನ ಪ್ರಕ್ರಿಯೆ?
ದೆಹಲಿ ಸ್ಫೋಟ ಪ್ರಕರಣದ ಆರೋಪಿಗಳು ʻಇಮೇಲ್-ಡ್ರಾಫ್ಟ್ʼ ವಿಧಾನದ (Dead Drop Secret) ಮೂಲಕ ಸಂವಹನ ನಡೆಸುತ್ತಿದ್ದರು. ಇಮೇಲ್‌ನಲ್ಲಿ ಸಂದೇಶ ಬರೆದು, ಚಿತ್ರ, ವಿಡಿಯೊಗಳನ್ನು ಅಪ್‌ಲೋಡ್ ಮಾಡಿ, ಅದನ್ನ ಸಂಬಂಧಿಸಿದ ವ್ಯಕ್ತಿಯ ಇಮೇಲ್‌ಗೆ ಕಳುಹಿಸುವ ಬದಲು ಆ ವ್ಯಕ್ತಿಯ ಹೆಸರಿನಲ್ಲಿ ಡ್ರಾಫ್ಟ್‌ ಫೋಲ್ಡರ್‌ನಲ್ಲೇ ಸೇವ್‌ ಮಾಡುತ್ತಿದ್ದರು. ಭದ್ರತಾ ಸಂಸ್ಥೆಗಳ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಮತ್ತು ಸಂವಹನದ ಮೂಲವನ್ನ ಸುಲಭವಾಗಿ ಪತ್ತೆಹಚ್ಚಬಾರದು ಎಂಬ ಕಾರಣಕ್ಕೆ ಈ ವಿಧಾನ ಅನುಸರಿಸುತ್ತಿದ್ದರು ಎಂದು ತನಿಖಾ ಮೂಲಗಳು ತಿಳಿಸಿವೆ.

ಆರೋಪಿಗಳಾದ ಅಲ್‌- ಫಲಾಹ್ ವಿಶ್ವವಿದ್ಯಾಲಯದ ಡಾ. ಉಮರ್ ನಬಿ, ಡಾ. ಮುಜಮ್ಮಿಲ್ ಗನಿ ಮತ್ತು ಡಾ. ಶಾಹೀನ್ ಶಾಹಿದ್ ಅವರು ಸಂವಹನಕ್ಕಾಗಿ ಒಂದೇ ಇಮೇಲ್ ಖಾತೆಯನ್ನ ಬಳಸುತ್ತಿದ್ದರು. ಈ ಖಾತೆಯ ‘ಇಮೇಲ್ ಡ್ರಾಫ್ಟ್’ನಲ್ಲಿರುವ ಸಂದೇಶಗಳು ನೆಟ್ವರ್ಕ್ ಮೂಲಕ ರವಾನೆಯಾಗುತ್ತಿರಲಿಲ್ಲ. ಹೀಗಾಗಿ ಆರೋಪಿಗಳ ನಡುವಿನ ಸಂವಹನ ವಿಧಾನವನ ಪತ್ತೆ ಹಚ್ಚುವುದು ಸವಾಲಾಗಿತ್ತು. ಇಮೇಲ್ ಡ್ರಾಫ್ಟ್ ಜೊತೆಗೆ ಚಿತ್ರ, ನಕ್ಷೆ, ಲೊಕೇಶನ್ ವಿವರಗಳನ್ನೂ ಹಂಚಿಕೊಳ್ಳಲು ʻಮಾʼ ಎಂಬ ಗೂಢಲಿಪಿಯ ಇನ್‌ಸ್ಟಂಟ್‌ ಮೆಸೇಜಿಂಗ್‌ ಅಪ್ಲಿಕೇಷನ್ ಬಳಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನವೆಂಬರ್‌ 10 ರಂದು ಸಂಜೆ ಕೆಂಪುಕೋಟೆ ಬಳಿ ಹುಂಡೈ ಐ20 ಕಾರು ಕಾರುಸ್ಫೋಟಗೊಂಡು 13 ಮಂದಿ ಮೃತಪಟ್ಟಿದ್ದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವಾರು ವಾಹನಗಳು ಹಾನಿಗೊಳಗಾಗಿದ್ದವು. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಹೊಸ ಹೊಸ ರಹಸ್ಯಗಳು ಬಯಲಾಗುತ್ತಿವೆ.

Share This Article