ದೆಹಲಿಯಲ್ಲಿ ಕಮಲವನ್ನೇ ಗುಡಿಸಿ ಹಾಕುತ್ತಾ ಕೈಯಲ್ಲಿರೋ ಪೊರಕೆ?

Public TV
1 Min Read

– 70 ಕ್ಷೇತ್ರಗಳಲ್ಲಿ ಇಂದು ಮತದಾನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಗದ್ದುಗಾಗಿ ನಡೆಯುತ್ತಿದ್ದ ಹೋರಾಟ ಅಂತಿಮ ಹಂತ ತಲುಪಿದೆ. ಇಂದು ದೆಹಲಿಯ ವಿಧಾನಸಭೆಗೆ ಮತದಾನ ಆರಂಭವಾಗಿದೆ.

ಕಳೆದ ಹದಿನೈದು ದಿನಗಳಿಂದ ರಾಜಕೀಯ ಕೇಸರಾಟಕ್ಕೆ ವೇದಿಕೆಯಾಗಿದ್ದ ದೆಹಲಿ ಚುನಾವಣೆ ಅಂತಿಮ ಘಟ್ಟಕ್ಕೆ ಬಂದಿದೆ. ರಾಷ್ಟ್ರ ರಾಜಧಾನಿ 70 ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷಗಳ 210, ಪ್ರಾದೇಶಿಕ ಪಕ್ಷಗಳ 90 ಹಾಗೂ 372 ಮಂದಿ ಇತರೆ ಪಕ್ಷಗಳು, ಪಕ್ಷೇತರರು ಸೇರಿ ಒಟ್ಟು 672 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ಪ್ರಕ್ರಿಯೆ ನಡೆಯಲಿದ್ದು, ಕೇಂದ್ರದ ಭದ್ರತಾ ಪಡೆಗಳನ್ನು ಒಳಗೊಂಡಂತೆ 90 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ದೆಹಲಿಯಲ್ಲಿ 80.55 ಲಕ್ಷ ಪುರುಷ, 66.35 ಮಹಿಳೆಯರು ಸೇರಿ ಒಟ್ಟು 1.46 ಕೋಟಿ ಮತದಾರರಿದ್ದಾರೆ. ಸುಲಭ ಮತದಾನಕ್ಕಾಗಿ 13,750 ಮತಗಟ್ಟೆಗನ್ನು ಸ್ಥಾಪನೆ ಮಾಡಿದ್ದು, ಮಹಿಳೆಯರಿಗೆ ವಿಶೇಷವಾಗಿ ಪಿಂಕ್ ಬೂತ್‍ಗಳು ಹಾಗೂ ದಿವ್ಯಾಂಗರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮೊದಲ ಬಾರಿಗೆ ಮತದಾರರಿಗೆ ಸುಲಭವಾಗುವ ನಿಟ್ಟಿನಲ್ಲಿ ಆನ್ ಲೈನ್ ಮೂಲಕ ವೋಟರ್ ಸ್ಲೀಪ್ ಪಡೆಯುವ ವ್ಯವಸ್ಥೆ ಚುನಾವಣಾ ಆಯೋಗ ಮಾಡಿದೆ.

ಕಾಸ್ಮೊಸಿಟಿಯ ಈ ಪೊಲಿಟಿಕ್ಸ್‍ನಲ್ಲಿ ಆಮ್ ಆದ್ಮಿ ಪಕ್ಷದ ಶೇ.25ರಷ್ಟು, ಬಿಜೆಪಿಯ ಶೇ.20ರಷ್ಟು, ಕಾಂಗ್ರೆಸ್ಸಿನ ಶೇ.15ರಷ್ಟು ಅಭ್ಯರ್ಥಿಗಳು ವಿರುದ್ಧ ಗಂಭೀರ ಅಪರಾಧಗಳಿವೆ. 50ಕ್ಕೂ ಹೆಚ್ಚು ಮಂದಿ ಕೊಟ್ಯಧಿಪತಿಗಳಿದ್ದಾರೆ.

ಜಾರ್ಖಂಡ್ ಚುನಾವಣೆ ಬಳಿಕ ಸಿಎಎ ಆರ್ಥಿಕ ಸಂಕಷ್ಟದ ಕರಿ ನೆರಳಿನಲ್ಲಿ ನಡೆಯುತ್ತಿರುವ ಎರಡನೇ ಚುನಾವಣೆ ಇದಾಗಿದೆ. ಹೀಗಾಗಿ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದು, ಗೆಲುವು ಅನಿವಾರ್ಯವಾಗಿದೆ. ಇತ್ತ ದೆಹಲಿಯಲ್ಲಿ ಅಭಿವೃದ್ಧಿ ಮೂಲ ಮಂತ್ರ ಪಠಿಸುತ್ತಿರುವ ಕೇಜ್ರಿವಾಲ್ ನೇತೃತ್ವದ ಆಮ್ ಅದ್ಮಿ ಮತ್ತೊಮ್ಮೆ ಅಧಿಕಾರಕ್ಕೇರುವ ಉತ್ಸಾಹದಲ್ಲಿದೆ. ಕಾಂಗ್ರೆಸ್ ಮಾತ್ರ ಸ್ಪರ್ಧೆಗಷ್ಟೇ ಸೀಮಿತವಾಗಿದ್ದು, ಈ ಬಾರಿ ಅಕೌಂಟ್ ಓಪನ್ ಮಾಡುವ ಲೆಕ್ಕಚಾರದಲ್ಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲ ಆಪ್ ಸುಲಭ ಸರ್ಕಾರ ನಡೆಸಲಿದೆ ಎಂದಿದ್ದು, ಇಂದು ಮತದಾನದ ಬಳಿಕ ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *