ದೆಹಲಿ ಮತದಾರರನ್ನು ಸೆಳೆಯಲು ಬಿಜೆಪಿಯಿಂದ ಮಾಸ್ಟರ್ ಪ್ಲ್ಯಾನ್

Public TV
2 Min Read

– 5 ಸಾವಿರ ನಿರಾಶ್ರಿತರನ್ನು ರ‍್ಯಾಲಿಗೆ ಕರೆತರಲು ನಿರ್ಧಾರ
– ಸಿಎಎ ಮೂಲಕವೇ ಮತ ಸೆಳೆಯಲು ಬಿಜೆಪಿ ನಿರ್ಧಾರ

ನವದೆಹಲಿ: ರಾಷ್ಟ್ರ ರಾಜಧಾನಿಯನ್ನು ಶತಾಯಗತಾಯ ಗೆಲ್ಲಲೇಬೇಕೆಂದು ರಾಜಕೀಯ ಪಕ್ಷಗಳು ವಿವಿಧ ತಂತ್ರಗಳನ್ನು ಹೆಣೆಯುತ್ತಿದ್ದು, ಇದರ ಭಾಗವಾಗಿ ಬಿಜೆಪಿ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.

ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ಬಿಜೆಪಿ ನಾಯಕರು ಹಾಗೂ ಎಎಪಿ, ಕಾಂಗ್ರೆಸ್ ಭರ್ಜರಿ ಪ್ರಚಾರ ಕಾರ್ಯ ನಡೆಸಿವೆ. ಅಲ್ಲದೆ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿವೆ. ಫೆಬ್ರವರಿ 8ಕ್ಕೆ ಮತದಾನ ದಿನಾಂಕ ನಿಗದಿಯಾಗಿದ್ದು, ನಾಳೆಯಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದೆ. ಈಗಾಗಲೇ ಬಿಜೆಪಿ, ಆಮ್ ಅದ್ಮಿ ಮತ್ತು ಕಾಂಗ್ರೆಸ್ ಪ್ರಚಾರ ಕಾರ್ಯಗಳನ್ನು ಆರಂಭಿಸಿವೆ.

ಆಮ್ ಅದ್ಮಿ ತನ್ನ ಐದು ವರ್ಷಗಳ ಸಾಧನೆಯನ್ನು ಜನರ ಮುಂದಿಟ್ಟರೆ, ಬಿಜೆಪಿ ಕೇಂದ್ರ ಸರ್ಕಾರದ ಅಭಿವೃದ್ಧಿ ಪರ ಕೆಲಸಗಳು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ವಲಸೆ ಬಂದು ಅಕ್ರಮವಾಗಿ ದೆಹಲಿಯ ಹೊರ ಭಾಗದಲ್ಲಿ ಸಾಕಷ್ಟು ದೊಡ್ಡ ಪ್ರಮಾಣ ನಿರಾಶ್ರಿತರು ವಾಸವಾಗಿದ್ದು, ಈ ಮತಗಳನ್ನು ಪಡೆದುಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಜನವರಿ 18 ರಂದು ದೆಹಲಿಯಲ್ಲಿ ಬೃಹತ್ ರ‍್ಯಾಲಿ ನಡೆಸಲು ಉದ್ದೇಶಿಸಿದೆ. ಪಾಕಿಸ್ತಾನದಿಂದ ಬಂದು ದೆಹಲಿಯಲ್ಲಿ ವಾಸವಾಗಿರುವ ನಿರಾಶ್ರಿತರು ಈ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಜಂತರ್ ಮಂತರ್ ನಿಂದ ಬಿಜೆಪಿ ಕೇಂದ್ರ ಕಚೇರಿಯವರೆಗೆ ಮೆರವಣಿಗೆ ಮಾಡಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿ ಅಭಿನಂದನೆ ಸಲ್ಲಿಸಲಿದ್ದಾರೆ.

ಅಖಿಲ ಭಾರತ ಭೋವಿ ಸಮುದಾಯದ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಡಾ.ವೆಂಕಟೇಶ ಮೌರ್ಯ ನೇತೃತ್ವದಲ್ಲಿ ಪಾಕಿಸ್ತಾನದಿಂದ ಬಂದು ದೆಹಲಿಯಲ್ಲಿ ನೆಲೆಸಿರುವ ಐದು ಸಾವಿರ ಮಂದಿ ಭೋವಿ ಸಮುದಾಯದ ನಿರಾಶ್ರಿತರು ಈ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. 1988ರಲ್ಲಿ ಪಾಕಿಸ್ತಾನ ಸಂಸತ್‍ಗೆ ನಾಮ ನಿರ್ದೇಶಿತಗೊಂಡಿದ್ದ ಸಂಸದ ಡಿವ್ಯರಾಮ್, ಸಿಂದ್ ಪ್ರಾಂತ್ಯದ ಮಾಜಿ ಕಾರ್ಪೊರೇಟರ್ ಅಮಿತ್ ಚಂದ್, ಸಿಎಎ ಬೆಂಬಲಿಸಿ ಅಮಿತ್ ಶಾಗೆ ಪತ್ರ ಬರೆದಿದ್ದ ಸಾಹಿಬಾ ಮತ್ತು ರಾಬೇಲಿಯವರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಸಿಎಎ ಜಾರಿ ತಂದಿದಕ್ಕೆ ಅಭಿನಂದನೆ ಜೊತೆಗೆ ಸಧ್ಯ ವಾಸವಾಗಿರುವ ಅಕ್ರಮ ಮನೆಗಳನ್ನು ಸರ್ಕಾರ ಸಕ್ರಮ ಮಾಡಿಕೊಡಬೇಕು. ಅಲ್ಲದೆ ಪ್ರತಿ ಕುಟುಂಬಕ್ಕೆ ಸರ್ಕಾರಿ ಉದ್ಯೋಗ, ಉಚಿತ ಮನೆ ಹಾಗೂ ಹಣಕಾಸಿನ ನೆರವು ನೀಡಬೇಕು ಎಂದು ಹೆಚ್ಚುವರಿ ಮನವಿ ಮಾಡಲಿದ್ದಾರೆ. ಬಿಜೆಪಿ ನಾಯಕರು ಈ ರ‍್ಯಾಲಿಯ ನೇತೃತ್ವದ ಹೊತ್ತಿದ್ದು, ದೆಹಲಿ ಚುನಾವಣೆಯಲ್ಲಿ ಸಿಎಎ ಮೂಲಕ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ ದೇಶಾದ್ಯಂತ ಎದ್ದಿರುವ ವಿರೋಧಿ ಅಲೆಗೆ ಪರೋಕ್ಷವಾಗಿ ಪ್ರತ್ಯುತ್ತರ ನೀಡುವ ಪ್ರಯತ್ನ ಬಿಜೆಪಿ ಮಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *