ತೀವ್ರ ಕಳಪೆ ಮಟ್ಟಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ – ಅ.29, 30ರಂದು ಕೃತಕ ಮಳೆ ಸಾಧ್ಯತೆ

Public TV
1 Min Read

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಸೋಮವಾರದಿಂದ ಪಶ್ಚಿಮದ ಅಡಚಣೆಯಿಂದಾಗಿ ಕನಿಷ್ಠ ತಾಪಮಾನ 18-20 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಪಶ್ಚಿಮದ ಅಡಚಣೆಯಿಂದಾಗಿ ಸೋಮವಾರ ಮತ್ತು ಮಂಗಳವಾರ ದೆಹಲಿಯಲ್ಲಿ ಹಗುರ ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ, ದೆಹಲಿ ಸರ್ಕಾರ (Delhi Government) ಅ.29 ರಿಂದ 2 ದಿನಗಳ ಕಾಲ ಕೃತಕ ಮಳೆ ಸುರಿಸುವ ಯೋಜನೆ ಪ್ರಕಟಿಸಿದೆ.

ಹೌದು. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಆನಂದ್‌ ವಿಹಾರ ಪ್ರದೇಶದಲ್ಲಿ ವಾಯುಗುಣಮಟ್ಟ ಸೂಚ್ಯಂಕ (AQI) 420 ನಷ್ಟಿದೆ. ಇಂದು ಬೆಳಗ್ಗೆ ಕೂಡ ವಾಯುಗುಣಮಟ್ಟ ತೀವ್ರ ಕಳಪೆ ಮಟ್ಟದಲ್ಲಿ ಕಂಡುಬಂದಿದೆ. ಪರಿಸ್ಥಿತಿ ಹದಗೆಡುತ್ತಿರುವುದರಿಂದ ದೆಹಲಿ ಸರ್ಕಾರ ಮುಂದಿನ ವಾರದಲ್ಲಿ 2 ದಿನಗಳ ಕಾಲ ಕೃತಕ ಮಳೆಗೆ (Artificial Rain) ಸುರಿಸುವ ಯೋಜನೆ ಹಾಕಿಕೊಂಡಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಅಕ್ಟೋಬರ್ 28 ಎಂದು ಮೋಡಬಿತ್ತನೆ ನಡೆಯಲಿದೆ. ಪರಿಸ್ಥಿತಿ ಅನುಕೂಲಕರವಾಗಿದ್ದರೆ, ಅ.29 ಮತ್ತು 30 ರಂದು ದೆಹಲಿಯಲ್ಲಿ ಮೊದಲ ಕೃತಕ ಮಳೆ ಸುರಿಯಲಿದೆ.

ಆನಂದ್‌ ವಿಹಾರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 420 ದಾಖಲಾಗಿದ್ದರೆ, ಇತರ ಪ್ರದೇಶಗಳು ಮಾಲಿನ್ಯ ಮಟ್ಟದಲ್ಲಿ ಸ್ವಲ್ಪ ಚೇತರಿಕೆ ಕಂಡಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಲೋಧಿ ರಸ್ತೆಯಲ್ಲಿ ತುಂಬಾ ಕಳಪೆ’ ವರ್ಗದಲ್ಲಿ 287 ದಾಖಲಾಗಿದ್ದರೆ, ಇಂಡಿಯಾ ಗೇಟ್‌ನಲ್ಲಿ 325, ವಿವೇಕ್ ವಿಹಾರದಲ್ಲಿ 205 ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ. ಹೀಗಾಗಿ ಹಲವು ಪ್ರದೇಶಗಳಲ್ಲಿ ಕೃತಕ ಮಳೆ ಸುರಿಸಲು ದೆಹಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಗುರುವಾರ ಬುರಾರಿ ಪ್ರದೇಶದಲ್ಲಿ ಕೃತಕ ಮಳೆ ಪರೀಕ್ಷೆ ನಡೆಸಲಾಗಿತ್ತು. ಸಿಲ್ವರ್ ಅಯೋಡೈಡ್ ಮತ್ತು ಸೋಡಿಯಂ ಕ್ಲೋರೈಡ್ಡ್‌ ಅನ್ನು ವಿಮಾನದಿಂದ ಸಣ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಲಾಗಿತ್ತು.

Share This Article