ದೆಹಲಿ ಹಿಂಸಾಚಾರ ಪ್ರಚೋದನೆ- ಉಗ್ರ ಸಂಘಟನೆ ನಂಟು ಹೊಂದಿದ್ದ ಕಾಶ್ಮೀರಿ ದಂಪತಿ ಅರೆಸ್ಟ್

Public TV
1 Min Read

ನವದೆಹಲಿ: ದೆಹಲಿ ಹಿಂಸಾಚಾರ ಪ್ರಚೋದನೆ ನೀಡಿದ್ದ ಹಾಗೂ ಉಗ್ರ ಸಂಘಟನೆ ನಂಟು ಹೊಂದಿದ್ದ ಕಾಶ್ಮೀರಿ ದಂಪತಿಯನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಶ್ರೀನಗರದ ನಿವಾಸಿಗಳಾದ ಜಹಾಂಜೇಬ್ ಮತ್ತು ಹೀನಾ ಬಶೀರ್ ಬೇಗ್ ಬಂಧಿತರು. ಆರೋಪಿಗಳನ್ನು ಜಾಮಿಯಾ ನಗರದಿಂದ ಬಂಧಿಸಲಾಗಿದೆ ಎಂದು ದೆಹಲಿಯ ಒಪೊಲೀಸ್ ಹಿರಿಯ ಅಧಿಕಾರಿ ಪ್ರಮೋದ್ ಸಿಂಗ್  ಕುಶ್ವಾಹ್ ತಿಳಿಸಿದ್ದಾರೆ.

ಆರೋಪಿಗಳು ಮುಸ್ಲಿಂ ಯುವಕರನ್ನು ಪ್ರಚೋದಿಸುವ ಮೂಲಕ ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಆತ್ಮಾಹುತಿ ದಾಳಿಗೆ ಹಂಚು ರೂಪಿಸಿದ್ದರು ಎಂಬ ಸತ್ಯ ಬೆಳಕಿಗೆ ಬಂದಿದೆ. ಬಂಧಿತ ಬಳಿ ಇದ್ದ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳು ಮತ್ತು ಜಿಹಾದಿ ದಾಖಲೆಗಳು ಪೊಲೀಸರಿಗೆ ಸಿಕ್ಕಿವೆ. ಅಷ್ಟೇ ಅಲ್ಲದೆ ಆರೋಪಿಗಳು ಅಫ್ಘಾನಿಸ್ತಾನದ ಉಗ್ರ ಸಂಘಟನೆ ಐಎಸ್‍ಕೆಪಿಯ ಉನ್ನತ ನಾಯಕರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ತನಿಖೆಯ ವೇಳೆ ತಿಳಿದುಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಐಎಸ್‍ಕೆಪಿ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವಂಟ್-ಖೊರಾಸಮ್) ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಜಹಾಂಜೇಬ್ ಭಾಗಿಯಾಗಿರುವ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತು. ಐಎಸ್‍ಕೆಪಿ ಅಫ್ಘಾನಿಸ್ತಾನದಲ್ಲಿ ಐಸಿಸ್ ಅಂಗಸಂಸ್ಥೆಯಾಗಿದೆ. ಜಹಾಂಜೇಬ್ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಯತ್ನಿಸುತ್ತಿದ್ದ. ಅದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದ. ಅಷ್ಟೇ ಅಲ್ಲದೆ ಇಂಟರ್ನೆಟ್ ಮೂಲಕ ಭಯೋತ್ಪಾದಕ ಸಂಘಟನೆಗಳನ್ನು ಉತ್ತೇಜಿಸಿ, ಜಮ್ಮು ಮತ್ತು ಕಾಶ್ಮೀರದ ಹೊರಗೆ ಇಡೀ ದೇಶಕ್ಕೆ ಐಎಸ್‍ಕೆಪಿಯನ್ನು ಹರಡಲು ಅವರು ಬಯಸಿದ್ದ.

ಜಹಾಂಜೇಬ್ ಪತ್ನಿ ಹೀನಾ ಬಶೀರ್ ಬೇಗ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಐಸಿಸ್ ಅನ್ನು ಬೆಂಬಲಿಸುವಲ್ಲಿ ಸಕ್ರಿಯವಾಗಿದ್ದಳು. ಭಯೋತ್ಪಾದಕ ಚಟುವಟಿಕೆಗಳಿಗೆ ಸೂಕ್ತ ಜನರನ್ನು ಗುರುತಿಸುವಲ್ಲಿ ಅವಳು ಭಾಗಿಯಾಗಿದ್ದಳು. ಪ್ರಾಥಮಿಕ ವಿಚಾರಣೆಯಲ್ಲಿ ಜಹಾಂಜೇಬ್, ಐಸಿಸ್ ನಿಯತಕಾಲಿಕೆಯ ಸ್ವಾತ್ ಅಲ್-ಹಿಂದ್‍ನ ಫೆಬ್ರವರಿ ಆವೃತ್ತಿಯನ್ನು ಪ್ರಕಟಿಸುವಲ್ಲಿ ತೊಡಗಿಸಿಕೊಂಡಿದ್ದ ಎಂದು ಹೇಳಿದ್ದಾನೆ. ಸಿಎಎಯನ್ನು ವಿರೋಧಿಸುವ ಜನರಿಗೆ ಜಿಹಾದಿ ಮಾರ್ಗವನ್ನು ತೆಗೆದುಕೊಳ್ಳುವಂತೆ ಆ ನಿಯತಕಾಲಿಕೆ ಮನವಿ ಮಾಡಿತ್ತು. ಫೆಬ್ರವರಿ 24ರಂದು ಪತ್ರಿಕೆ ಆನ್‍ಲೈನ್‍ನಲ್ಲಿ ಬಿಡುಗಡೆಯಾಗಿತ್ತು. ಪ್ರಜಾಪ್ರಭುತ್ವವು ನಿಮ್ಮನ್ನು ಜನರನ್ನು ಉಳಿಸುವುದಿಲ್ಲ ಎಂದು ಅದು ಬರೆದಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

Share This Article
Leave a Comment

Leave a Reply

Your email address will not be published. Required fields are marked *