ವಿಶ್ವದ ಅತ್ಯಂತ ಕಲುಷಿತ ನಗರ ಕುಖ್ಯಾತಿಗೆ ಪಾತ್ರವಾದ ದೆಹಲಿ

Public TV
2 Min Read

– ನಿಷೇಧಕ್ಕೂ ಜಗ್ಗದೆ ಭಾರಿ ಪ್ರಮಾಣ ಪಟಾಕಿ ಸಿಡಿಸಿದ ಜನ

ನವದೆಹಲಿ: ನಿಷೇಧ ನಡುವೆಯೋ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪ್ರಮಾಣ ಪಟಾಕಿ ಸಿಡಿಸಲಾಗಿದ್ದು, ಶುಕ್ರವಾರ ಬೆಳಗ್ಗೆ 6 ಗಂಟೆಗೆ ಏರ್ ಕ್ವಾಲಿಟಿ ಇಂಡೆಕ್ಸ್ (AQI – ಗಾಳಿ ಗುಣಮಟ್ಟ ಸೂಚ್ಯಂಕ) 359 ನಲ್ಲಿ ದಾಖಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಇದು ʻಅತ್ಯಂತ ಕಳಪೆʼ ವಿಭಾಗಕ್ಕೆ ಸೇರಿದ್ದು ಈ ಮೂಲಕ ದೆಹಲಿ (NewDelhi) ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಲಜಪತ್ ನಗರ್, ಕಲ್ಕಾಜಿ, ಛತ್ತರ್‌ಪುರ, ಜೌನಾಪುರ್, ಕೈಲಾಶ್ ಪೂರ್ವ, ಸಾಕೇತ್, ರೋಹಿಣಿ, ದ್ವಾರಕಾ, ಪಂಜಾಬಿ ಬಾಗ್, ವಿಕಾಸಪುರಿ, ದಿಲ್ಶಾದ್ ಗಾರ್ಡನ್, ಬುರಾರಿ ಮತ್ತು ಪೂರ್ವ ಮತ್ತು ಪಶ್ಚಿಮ ದೆಹಲಿಯ ಹಲವಾರು ಪ್ರದೇಶಗಳು ಪಟಾಕಿಗಳನ್ನು (FireCrackers) ಸಿಡಿಸಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಇದನ್ನೂ ಓದಿ: Canada | ಗಾಯಕ ಎಪಿ ಧಿಲ್ಲೋನ್ ಮನೆ ಎದುರು ಗುಂಡು ಹಾರಿಸಿದ್ದ ವಿಡಿಯೋ ವೈರಲ್

ಬೆಳಿಗ್ಗೆ 6 ಗಂಟೆಗೆ, ಬುರಾರಿ ಕ್ರಾಸಿಂಗ್ (394), ಜಹಾಂಗೀರ್‌ಪುರಿ (387), ಆರ್‌ಕೆ ಪುರಂ (395), ರೋಹಿಣಿ (385), ಅಶೋಕ್ ವಿಹಾರ್ (384), ದ್ವಾರಕಾ ಸೆಕ್ಟರ್ 8 (375), ಐಜಿಐ ವಿಮಾನ ನಿಲ್ದಾಣ (375), ಮಂದಿರ ಮಾರ್ಗ ( 369), ಪಂಜಾಬಿ ಬಾಗ್ (391), ಆನಂದ್ ವಿಹಾರ್ (395), ಸಿರಿ ಫೋರ್ಟ್ (373) ಮತ್ತು ಸೋನಿಯಾ ವಿಹಾರ್ (392) ಗಾಳಿಯ ಗುಣಮಟ್ಟ ದಾಖಲಾಗಿದೆ. ಇದನ್ನೂ ಓದಿ: ಬೆಳಕಿನ ಹಬ್ಬವನ್ನು ಕಣ್ತುಂಬಿಕೊಳ್ಳಬೇಕಾ? ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ!

ಎನ್‌ಸಿಆರ್ ಪ್ರದೇಶಗಳಾದ ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ್‌ಗಳು ಕ್ರಮವಾಗಿ 293, 316 ಮತ್ತು 348 ಎಕ್ಯೂಐ ಮಟ್ಟವನ್ನು ದಾಖಲಿಸಿವೆ. ಅಕ್ಟೋಬರ್ 14 ರಂದು, ದೆಹಲಿ ಸರ್ಕಾರವು ನಗರದಾದ್ಯಂತ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯ ಮೇಲೆ ನಿಷೇಧವನ್ನು ವಿಧಿಸಿತು. ಅದಾಗ್ಯೂ ಜನರು ಅಧಿಕ ಪ್ರಮಾಣ ಪಟಾಕಿ ಸಿಡಿಸಿದ್ದಾರೆ.

ದೀಪಾವಳಿ ಮುನ್ನಾದಿನದಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ರಾಷ್ಟ್ರ ರಾಜಧಾನಿಯಾದ್ಯಂತ ಪಟಾಕಿ ನಿಷೇಧ ಜಾರಿಗೊಳಿಸಲು 377 ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದರು. ಜಾಗೃತಿ ಮೂಡಿಸಲು ಅಧಿಕಾರಿಗಳು ಸಂಘಗಳು, ಮಾರುಕಟ್ಟೆ ಸಂಘಗಳು ಮತ್ತು ಸಾಮಾಜಿಕ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದರು. ಪಟಾಕಿ ಸಿಡಿಸದಂತೆ ನೋಡಿಕೊಳ್ಳಲು ಪೊಲೀಸ್ ತಂಡಗಳನ್ನೂ ರಚಿಸಲಾಗಿದೆ.

ಪಟಾಕಿಗಳನ್ನು ಸಿಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಯ ಸಂಬಂಧಿತ ವಿಭಾಗಗಳ ಅಡಿಯಲ್ಲಿಯೂ ದಾಖಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು‌. ಆದರೆ ಈ ಯಾವುದು ಪ್ರಯೋಜನಕ್ಕೆ ಬಂದಿಲ್ಲ.

Share This Article