ಕೃಷಿ ತ್ಯಾಜ್ಯ ಸುಟ್ಟಿದ್ದಕ್ಕೆ ಪಂಜಾಬಿನಲ್ಲಿ 84 ರೈತರ ಬಂಧನ

Public TV
2 Min Read

ನವದೆಹಲಿ: ಮಿತಿಮೀರಿದ ವಾಯುಮಾಲಿನ್ಯ ಸಂಬಂಧ ದೆಹಲಿ ಸಮೀಪದ ಮೂರು ರಾಜ್ಯಗಳ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ಇಂದು ಪಂಜಾಬ್‌ನಲ್ಲಿ 84 ರೈತರನ್ನು ಬಂಧಿಸಲಾಗಿದೆ.

ಪ್ರತಿ ಚಳಿಗಾಲದಲ್ಲೂ ಕೊಯ್ಲಿನ ನಂತರ ರೈತರು ಬೆಳೆ ಸುಡುವುದರಿಂದ ವಿಷಕಾರಿ ಹೊಗೆ ದೆಹಲಿಯನ್ನು ಆವರಿಸುತ್ತದೆ. ಇದು ವಾಹನಗಳು ಹಾಗೂ ಕಾರ್ಖಾನೆಯ ಹೊಗೆಯೊಂದಿಗೆ ಸೇರಿಕೊಳ್ಳುತ್ತದೆ. ಇದೇ ದೆಹಲಿಯನ್ನು ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯನ್ನಾಗಿ ಪರಿವರ್ತನೆಗೆ ಕಾರಣವಾಗುತ್ತದೆ.

ಬುಧವಾರ ಸುಪ್ರೀಂ ಕೋರ್ಟ್ ಈ ಕುರಿತು ಅಧಿಕಾರಿಗಳಿಗೆ ಚಾಟಿ ಬೀಸಿ ರೈತರಲ್ಲಿ ಕೃಷಿ ತ್ಯಾಜ್ಯ ಸುಡದಂತೆ ಸೂಚಿಸಿತ್ತು. ಆದರೂ ಸಹ ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ರೈತರು ಕೃಷಿ ತ್ಯಾಜ್ಯವನ್ನು ಸುಡುತ್ತಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಪಂಜಾಬ್‌ನಲ್ಲಿ 17 ಸಾವಿರಕ್ಕೂ ಹೆಚ್ಚು ಕೃಷಿ ಜಮೀನುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬುಧವಾರ ಒಂದೇ ದಿನ 4,741 ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪಂಜಾಬಿನ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಕಾನೂನು ಉಲ್ಲಂಘಿಸಿದ್ದಕ್ಕಾಗಿ 84ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 174 ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಂಜಾಬ್ ಮತ್ತು ಹರ್ಯಾಣ ಪ್ರತಿ ವರ್ಷ ಸುಮಾರು 18 ದಶಲಕ್ಷ ಟನ್ ಅಕ್ಕಿ ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿದ್ದು, ಕೇವಲ ಈ ಎರಡು ರಾಜ್ಯಗಳಲ್ಲಿ 20 ದಶಲಕ್ಷ ಟನ್ ಕೃಷಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣವನ್ನು ಸುಡಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ ಅಂತ್ಯದ ವೇಳೆಗೆ ಎರಡೂ ರಾಜ್ಯಗಳಲ್ಲಿ 48 ಸಾವಿರಕ್ಕೂ ಹೆಚ್ಚು ಕೃಷಿ ಗದ್ದೆಗಳಿಗೆ ಬೆಂಕಿ ಹಚ್ಚಲಾಗಿದೆ. 2018ರಲ್ಲಿ 30 ಸಾವಿರ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಈ ಬಾರಿ ಭಾರೀ ಏರಿಕೆ ಕಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ನಿನ್ನೆಯಷ್ಟೇ ಯಾವುದೇ ದೇಶದಲ್ಲಿ ಕೃಷಿ ತ್ಯಾಜ್ಯ ಸುಡಲು ಸರ್ಕಾರಗಳು ಅನುಮತಿ ಕೊಟ್ಟಿಲ್ಲ. ವಾಯುಮಾಲಿನ್ಯ ತಡೆ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸದ ಅಧಿಕಾರಿಗಳು, ರೈತರ ಮೇಲೆ ಗೂಬೆ ಕೂರಿಸ್ತಿದ್ದೀರಾ? ನಿಮಗೆ ನಾಚಿಕೆ ಆಗುದಿಲ್ಲವೇ ಎಂದು ಪ್ರಶ್ನಿಸಿ ಮೂರು ರಾಜ್ಯಗಳ ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.

ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಈ ಸಾಧನೆಗೆ ಗರ್ವ ಪಡ್ತಿದ್ದೀರಾ? ಅಧಿಕಾರಿಗಳನ್ನು ಶಿಕ್ಷಿಸುವ ಸಮಯ ಬಂದಿದೆ ಎಂದು ಹೇಳಿ ಎಚ್ಚರಿಸಿತ್ತು. ಜೊತೆಗೆ, ಮೂರು ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡದಂತೆ ಆದೇಶಿಸಿತ್ತು.

ಇದು ಕೋಟಿ ಜನರ ಬದುಕಿನ ಪ್ರಶ್ನೆ. ಈ ರೀತಿ ನಿರ್ಲಕ್ಷ್ಯದಿಂದಿರುವುದು ಸರಿಯೇ? ನಿಮ್ಮ ವೈಫಲ್ಯ ನಿಮಗೆ ಗೊತ್ತಾಗುತ್ತಿಲ್ಲವೇ? ನಿಮ್ಮನ್ನೂ ನಾವು ಈ ಕೂಡಲೇ ಅಮಾನತುಗೊಳಿಸಬಹುದು ಎಂದು ಕಾರ್ಯದರ್ಶಿಗಳಿಗೆ ಎಚ್ಚರಿಕೆ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *