ಕ್ಲಾಸ್ ಮೆಟ್ ಬಾಲಕಿಯ ಪ್ಯಾಂಟ್ ಬಿಚ್ಚಿ ಲೈಂಗಿಕ ಕಿರುಕುಳ ಕೊಟ್ಟಿದ್ದ ಬಾಲಕನ ವಿರುದ್ಧ ದೂರು ದಾಖಲು!

Public TV
1 Min Read

ನವದೆಹಲಿ: ತನ್ನ ತರಗತಿಯ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ 4 ವರ್ಷದ ಬಾಲಕನ ವಿರುದ್ಧ ದೂರು ದಾಖಲಾಗಿರುವ ಘಟನೆ ದೆಹಲಿಯ ದ್ವಾರಕದಲ್ಲಿ ನಡೆದಿದೆ.

ದ್ವಾರಕ ಬಳಿಯ ಶಾಲೆಯ ಬಾಲಕ ಈ ರೀತಿ ಕೃತ್ಯ ಎಸಗಿದ್ದಾನೆ. ಕಳೆದ ವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಪೋಷಕರು ತಮ್ಮ ಮಗಳು ನಡೆದ ವಿಚಾರವನ್ನು ಹೇಳಿದ ಬಳಿಕ ಬಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.

ಶುಕ್ರವಾರ ಶಾಲೆ ಮುಗಿದ ಮೇಲೆ ಬಾಲಕಿ ಮನೆಗೆ ಬಂದಿದ್ದಾಳೆ. ನಂತರ ತನ್ನ ಗುಪ್ತಾಂಗದಲ್ಲಿ ಆಗುತ್ತಿದ್ದ ನೋವನ್ನು ಸಹಿಸಲಾಗದೆ ತಾಯಿಯ ಹತ್ತಿರ ಹೇಳಿಕೊಂಡಿದ್ದು, ನಮ್ಮ ತರಗತಿಯ ಹುಡುಗ ನನ್ನ ಪ್ಯಾಂಟ್ ಬಿಚ್ಚಿ ಅವನು ಒಳಗೆ ಕೈ ಹಾಕಿದ್ದ. ಅಲ್ಲದೇ ಶಾರ್ಪ್ ಮಾಡಿದ್ದ ತನ್ನ ಪೆನ್ಸಿಲ್ ಅನ್ನು ಕೂಡ ಒಳಗೆ ಇಟ್ಟಿದ್ದ ಅಂತಾ ಹೇಳಿದ್ದಾಳೆ.

ವಿಚಾರ ತಿಳಿದ ಬಳಿಕ ಪೋಷಕರು ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದ್ದಾರೆ. ನಂತರ ವೈದ್ಯರು ಇದು ಲೈಂಗಿಕ ಕಿರುಕುಳ ಎಂದು ಹೇಳಿದ ಬಳಿಕ ದ್ವಾರಕ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

 

ಈ ಘಟನೆಯ ನಂತರ ನಾವು ಪ್ರಿನ್ಸಿಪಾಲ್, ಶಿಕ್ಷಕರು, ಸಂಯೋಜಕರು ಎಲ್ಲರ ಬಳಿ ಸಹಾಯ ಕೇಳಿದೆವು. ಆದರೆ ಯಾರು ಕೂಡ ಸಹಾಯ ಮಾಡಲಿಲ್ಲ. ಶಾಲೆಯ ನಿರ್ವಹಣಾ ಮಂಡಳಿಯ ನಿರ್ಲಕ್ಷ್ಯದಿಂದ ಈ ರೀತಿ ನಡೆದಿದೆ. ಆರೋಪಿತ ವಿದ್ಯಾರ್ಥಿಯ ಬಗ್ಗೆ ವಿವರಗಳನ್ನು ನೀಡಲು ನಿರಾಕರಿಸಿದರು ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ನಾವು ಅತ್ಯಾಚಾರ ಪ್ರಕರಣದಲ್ಲಿ ದೂರನ್ನು ದಾಖಲಿಸಿಕೊಂಡಿದ್ದೇವೆ, ಆದರೆ ಚಿಕ್ಕ ವಯಸ್ಸಿನ ಆರೋಪಿಗಳ ವಿರುದ್ಧ ಹೇಗೆ ವಿಚಾರಣೆ ನಡೆಸಬೇಕು ಎಂದು ತಿಳಿಯದೆ ಕಾನೂನು ತಜ್ಞರ ಸಲಹೆಯನ್ನು ಕೇಳಿದ್ದೇವೆ, ಅಷ್ಟೇ ಅಲ್ಲದೇ 7 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಾನೂನಿನ ಅಡಿಯಲ್ಲಿ ಯಾವುದೇ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ದೆಹಲಿ ಪೊಲೀಸ್ ದೀಪೇಂದ್ರ ಪಾಠಕ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *