ಶ್ರೀರಾಮನಗರಿಯಲ್ಲಿ ಝಗಮಗಿಸಿದ ದೀಪೋತ್ಸವ – 26 ಲಕ್ಷ ದೀಪಗಳಿಂದ ಕಂಗೊಳಿಸಿದ ಅಯೋಧ್ಯೆ

Public TV
1 Min Read

– ಇಷ್ಟೊಂದು ಖರ್ಚು ಬೇಕಾ ಅಂತ ಅಖಿಲೇಶ್ ಕೊಂಕುನುಡಿ

ಲಕ್ನೋ: ದೇಶಾದ್ಯಂತ ದೀಪಗಳ ಹಬ್ಬ ದೀಪಾವಳಿ (Diwali) ಸಂಭ್ರಮ ಮನೆ ಮಾಡಲಿದೆ. ಅದರ ಮುನ್ನಾದಿನವೇ ಶ್ರೀರಾಮನಗರಿ ಅಯೋಧ್ಯೆಯಲ್ಲಿ (Ayodhya) ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ.

ಅಯೋಧ್ಯೆ ನಗರಿ ದೀಪಗಳಿಂದ ಝಗಮಗಿಸುತ್ತಿದೆ. 26 ಲಕ್ಷ ದೀಪಗಳು ಶ್ರೀರಾಮನೂರನ್ನು ಬೆಳಗುತ್ತಿವೆ. ಪ್ರತಿ ವರ್ಷದಂತೆ ಈ ವರ್ಷವೂ ಸರಯೂ ನದಿಯ ತಟದಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಅಯೋಧ್ಯೆಯ ಪವಿತ್ರ ಸರಯು ನದಿಯ ತೀರದಲ್ಲಿ 26,11,101 ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಿದೆ. ಇದನ್ನೂ ಓದಿ: ದೀಪಾವಳಿ ಹಿನ್ನೆಲೆ ಜಾತಿಗಣತಿ ಸಮೀಕ್ಷೆಗೆ ಅ.23ರವರೆಗೆ ತಾತ್ಕಾಲಿಕ ಬ್ರೇಕ್

ರಾಮ ಕಿ ಪೌಡಿ ಸೇರಿದಂತೆ 56 ಘಾಟ್‌ಗಳಲ್ಲಿ ದೀಪಗಳು ಪ್ರಜ್ವಲಿಸಿವೆ. 2017ರಲ್ಲಿ ಈ ಉತ್ಸವ ಆರಂಭವಾದಾಗ ಕೇವಲ 1.71 ಲಕ್ಷ ದೀಪಗಳನ್ನು ಬೆಳಗಿಸಲಾಗಿತ್ತು. ಕಳೆದ ವರ್ಷ 25.12 ಲಕ್ಷ ದೀಪಗಳನ್ನ ಹಚ್ಚಲಾಗಿತ್ತು.

ಅಯೋಧ್ಯೆಯಲ್ಲಿ ದೀಪೋತ್ಸವ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿವಾದದ ಕಿಡಿ ಹೊತ್ತಿಸಿದ್ದಾರೆ. ದೀಪಗಳು ಮತ್ತು ಮೇಣದ ಬತ್ತಿಗಳಿಗಾಗಿ ಯೋಗಿ ಸರ್ಕಾರದ ವೆಚ್ಚವನ್ನು ಪ್ರಶ್ನಿಸಿದ್ದಾರೆ. ಆಯೋಧ್ಯೆ ದೀಪೋತ್ಸವಕ್ಕಾಗಿ ಪ್ರತಿ ವರ್ಷ ಖರ್ಚು ಮಾಡುತ್ತಿದ್ದಾರೆ. ದೀಪೋತ್ಸವಕ್ಕೆ ಹಣತೆ ಖರ್ಚು ಯಾಕೆ? ನೀವು ಕ್ರೈಸ್ತರ ಕ್ರಿಸ್ಮಸ್ ಆಚರಣೆ ನೋಡಿ, ಅವರು ಕ್ರಿಸ್ಮಸ್ ವೇಳೆ ಒಂದು ತಿಂಗಳು ಎಲ್ಲಾ ನಗರಗಳನ್ನು ಲೈಟ್ ಮೂಲಕ ಸಿಂಗರಿಸುತ್ತಾರೆ. ನೀವು ಹಣತೆ ಖರೀದಿಸುತ್ತಾ ಖರ್ಚು ಮಾಡುತ್ತಿದ್ದೀರಿ ಎಂದು ಅಖಿಲೇಶ್ ಯಾದವ್ ವಿವಾದಿತ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್‌ Vs ಸರ್ಕಾರ – ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಒಪ್ಪಿದ ಲಾಯರ್‌ | ಹೈಕೋರ್ಟ್‌ನಲ್ಲಿ ಏನಾಯಿತು?

ಅಖಿಲೇಶ್ ಹೇಳಿಕೆಯನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ತೀವ್ರವಾಗಿ ಟೀಕಿಸಿವೆ. ವ್ಯಾಟಿಕನ್ ಸಿಟಿಗೆ ಹೋಗಿ ಕ್ರಿಸ್‌ಮಸ್ ಆಚರಿಸಿ ಎಂದು ವಿಎಚ್‌ಪಿ ಹೇಳಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ, ವರ್ಷಗಳ ಕಾಲ ಅಯೋಧ್ಯೆಯನ್ನು ಕತ್ತಲಲ್ಲಿ ಇರಿಸಿದ ಮತ್ತು ರಾಮ ಭಕ್ತರ ಮೇಲೆ ದಾಳಿ ಮಾಡಿದ್ದಕ್ಕೆ ಹೆಮ್ಮೆ ಪಟ್ಟ ಪಕ್ಷವು ಈಗ ದೀಪೋತ್ಸವಕ್ಕಾಗಿ ನಗರದ ಅಲಂಕಾರವನ್ನು ವಿರೋಧಿಸುತ್ತಿದೆ ಎಂದಿದ್ದಾರೆ.

Share This Article