ಮದ್ವೆಯಲ್ಲಿಯೂ ಸಾಮಾಜಿಕ ಕಳಕಳಿ ಮೆರೆದ ದೀಪಿಕಾ

Public TV
2 Min Read

ಮುಂಬೈ: ಬಾಲಿವುಡ್ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ತಮ್ಮ ಬಹುದಿನಗಳ ಗೆಳೆಯ ರಣ್‍ವೀರ್ ಸಿಂಗ್ ರನ್ನು ನವೆಂಬರ್ 14ರಂದು ಮದುವೆ ಆಗಿದ್ದಾರೆ. ಇದೀಗ ದೀಪಿಕಾ ತಮ್ಮ ಮದುವೆಯಲ್ಲಿಯೂ ಸಾಮಾಜಿಕ ಕಳಕಳಿ ಮೆರೆದಿರುವುದು ಬೆಳಕಿಗೆ ಬಂದಿದೆ. ರಣ್‍ವೀರ್ ಸಿಂಗ್ ಇತ್ತೀಚೆಗೆ ತಮ್ಮ ಸಿಂಬಾ ಚಿತ್ರದ ಪ್ರಚಾರಕ್ಕಾಗಿ ಹಿಂದಿಯ ಖಾಸಗಿ ವಾಹಿನಿಯ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪತ್ನಿಯ ಸಮಾಜ ಸೇವೆಯನ್ನು ರಿವೀಲ್ ಮಾಡಿದ್ದಾರೆ.

 

ರಣ್‍ವೀರ್ ಸಿಂಗ್ ಶೋದಲ್ಲಿ ಭಾಗವಹಿಸಿದ್ದ ವೇಳೆ ಕಾರ್ಯಕ್ರಮದ ನಿರೂಪಕಿ (ಪುಟ್ಟ ಬಾಲಕಿ) ದೀಪಾಲಿ, ಪ್ರೆಶರ್ ಕುಕ್ಕರ್ ಮದುವೆ ಗಿಫ್ಟ್ ಅಂತಾ ನೀಡಿದಳು. ಮನೆಯಲ್ಲಿ ನೀವು ಮತ್ತು ದೀಪಿಕಾ ಅನ್ನ, ರಸಂ ಮಾಡಿಕೊಂಡು ತಿನ್ನಿ ಎಂದು ಹೇಳಿದಳು ಇದೇ ವೇಳೆ ದೀಪಾಲಿ, ನಿಮಗೆ ಮದುವೆಯಲ್ಲಿ ಅತಿಥಿಗಳಿಂದ ಏನೇನು ಸಿಕ್ತು ಅಂತಾ ಕೇಳಿದಾಗ, ನಾವು ಅತಿಥಿಗಳಿಂದ ಯಾವುದೇ ಕಾಣಿಕೆ ತೆಗೆದುಕೊಳ್ಳಬಾರದೆಂದು ದೀಪಿಕಾ ಷರತ್ತು ಹಾಕಿದ್ದರು. ಒಂದು ವೇಳೆ ಅತಿಥಿಗಳು ಗಿಫ್ಟ್ ನೀಡಲೇ ಬೇಕೆಂದ್ರೆ ತಾವು ನಡೆಸಿಕೊಡುವ ಚಾರಿಟಿ ಟ್ರಸ್ಟ್ ಗೆ ದೇಣಿಗೆ ನೀಡಬೇಕೆಂದು ದೀಪಿಕಾ ಹೇಳಿದ್ದರಂತೆ. ಪತ್ನಿಯ ಸಾಮಾಜಿಕ ಕಳಕಳಿಯಿಂದ ನಾನು ಒಪ್ಪಿಕೊಂಡಿದ್ದೆ ಎಂದು ರಣ್‍ವೀರ್ ವೇದಿಕೆಯಲ್ಲಿ ಹೇಳಿದರು.

 

ಮದುವೆಗೆ ಆಗಮಿಸುವ ಎಲ್ಲ ಅತಿಥಿಗಳಿಗೂ ಯಾವುದೇ ಕಾಣಿಕೆ ತರಕೂಡದು ಎಂದ ಸಂದೇಶವನ್ನು ತಲುಪಿಸಲಾಗಿತ್ತು. ಆದ್ರೆ ದೀಪಾಲಿಗೆ ಗೊತ್ತಿರಲಿಲ್ಲ, ಹಾಗಾಗಿ ಕುಕ್ಕರ್ ತಂದಿದ್ದಾಳೆ. ಕುಕ್ಕರ್ ತೆಗೆದುಕೊಂಡು ನಾನು ಇದರಲ್ಲಿ ಅನ್ನ ಮಾಡ್ತೀನಿ, ನನ್ನ ಪತ್ನಿ ರಸಂ ಮಾಡ್ತಾಳೆ ಎಂದು ಹೇಳಿ ರಣ್‍ವೀರ್ ಕಾರ್ಯಕ್ರಮದಲ್ಲಿದ್ದ ಎಲ್ಲರನ್ನು ನಗಿಸಿದರು.

ದೀಪಿಕಾ ಪಡುಕೋಣೆ ‘ಲೈವ್ ಲವ್ ಲಾಫ್ ಫೌಂಡೇಶನ್’ ಎಂದು ಎನ್‍ಜಿಓ ನಡೆಸುತ್ತಿದ್ದಾರೆ. ಇದರ ಮೂಲಕ ಮಾನಸಿಕ ಅಸ್ವಸ್ಥ ಮಕ್ಕಳ ಮತ್ತು ಜನರ ರಕ್ಷಣೆ ಮಾಡಲಾಗುತ್ತದೆ. ಮಾನಸಿಕ ಅಸ್ವಸ್ಥ ರಕ್ಷಣಾ ಕೇಂದ್ರಗಳು ನಡೆಸುವ ಇತರೆ ಸಹಾಯ ಸಂಘಗಳಿಗೆ ಇದು ತರಬೇತಿ ಮತ್ತು ಹಣಕಾಸಿನ ಸಹಾಯ ನೀಡಲಿದೆ. 2017 ಅಕ್ಟೋಬರ್ ನಲ್ಲಿ ದೀಪಿಕಾ ತಮ್ಮ ಎನ್‍ಜಿಓ ದಾವಣಗೆರೆಯಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು, ಪಲ್ಲಾಗಟ್ಟೆ ಹಾಗೂ ಮೆಳ್ಳೆಕಟ್ಟೆ ಗ್ರಾಮಗಳಿಗೆ ಭೇಟಿ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *