ಡೀಪ್‌ಫೇಕ್ ಎಫೆಕ್ಟ್ : ಸಹಾಯವಾಣಿ ತೆರೆದ ಬೆಂಗಳೂರು ಪೊಲೀಸರು

Public TV
3 Min Read

ಟಿಯರಾದ ರಶ್ಮಿಕಾ ಮಂದಣ್ಣ (Rashmika Mandanna), ಕತ್ರಿನಾ ಕೈಫ್‍, ಕಾಜೋಲ್ ಸೇರಿದಂತೆ ಅನೇಕ ಕಲಾವಿದರ ಮತ್ತು ಸಾಮಾನ್ಯ ಮಹಿಳೆಯರ ಡೀಪ್‌ಫೇಕ್ (DeepFake)  ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಡೀಪ್‌ಫೇಕ್ ಕಾಟಕ್ಕೆ ಬೇಸತ್ತ ಪ್ರತಿಯೊಬ್ಬರೂ ದುರುಳರಿಗೆ ಅತೀ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದನ್ನು ಕೂಡಲೇ ತಡೆಗಟ್ಟಬೇಕು ಎನ್ನುವ ಆಗ್ರಹ ಕೂಡ ಮಾಡಿದ್ದರು.

ಇದೀಗ ಬೆಂಗಳೂರು (Bangalore) ಪೊಲೀಸರು (Police) ಡೀಪ್‌ಫೇಕ್ ವಿರುದ್ಧ ತೊಡೆತಟ್ಟಿದ್ದಾರೆ. ಇಂತಹ ವಿಡಿಯೋಗಳಿಂದ ನೀವು ಸಂಕಷ್ಟಕ್ಕೆ ಸಿಲುಕಿದ್ದರೆ, ಸಹಾಯವಾಣಿಗೆ (Help Line) ಕರೆ ಮಾಡುವಂತೆ ಮನವಿ ಮಾಡಿದ್ದಾರೆ. ಕರೆ ಮಾಡಬೇಕಾದ ಹೆಲ್ಪ್ ಲೈನ್ ನಂಬರ್ ಕೂಡ ನೀಡಿದ್ದಾರೆ. ಯಾರಾದರೂ ಅಂತಹ ವಿಡಿಯೋಗಳಿಂದ ನೊಂದಿದ್ದೀರಾ? 1930 ಸಂಖ್ಯೆಗೆ ಕರೆ ಮಾಡಬಹುದು.

ಏನಿದು ಡೀಪ್‌ಫೇಕ್‌ ತಂತ್ರಜ್ಞಾನ?

ಒಬ್ಬರ ದೇಹಕ್ಕೆ ಇನ್ನೊಬ್ಬರ ತಲೆಯನ್ನು ಜೋಡಿಸಿ ಎಡಿಟಿಂಗ್‌ ಮಾಡುತ್ತಿದ್ದ ಫೋಟೋ, ವೀಡಿಯೋಗಳು ಸಾಮಾನ್ಯವಾಗಿದ್ದವು. ಇವು ಎಡಿಟಿಂಗ್‌ ಆಗಿರುವ ಫೋಟೋ/ವೀಡಿಯೋ ಎಂಬುದು ನೋಡಿದಾಕ್ಷಣ ತಿಳಿಯುತ್ತಿತ್ತು. ಇಲ್ಲವೇ ಸ್ವಲ್ಪವಾದರೂ ಅನುಮಾನ ಮೂಡುತ್ತದೆ. ಆದರೆ ಡೀಪ್‌ಫೇಕ್‌ ತಂತ್ರಜ್ಞಾನದಲ್ಲಿ ಆ ಯಾವುದೇ ಅನುಮಾನ ಬರುವುದಿಲ್ಲ. ಆ ರೀತಿ ಫೋಟೋ/ವೀಡಿಯೋ ಎಡಿಟ್‌ ಮಾಡಲಾಗುತ್ತದೆ. ವ್ಯಕ್ತಿಯ ದೇಹ ಮತ್ತು ಮುಖಕ್ಕೆ ಕೊಂಚವೂ ವ್ಯತ್ಯಾಸ ಇಲ್ಲದಂತೆ ವೀಡಿಯೋಗಳನ್ನ ಸೃಷ್ಟಿಸಲಾಗುತ್ತದೆ. ವೀಡಿಯೋ ನೋಡಿದರೆ ‘ಇದು ಬೇರೆ ಯಾರೂ ಅಲ್ಲ.. ಅವರೇ’ ಎನ್ನುವಷ್ಟು ನಿಖರತೆಯಿಂದ ಕೂಡಿರುತ್ತದೆ.

 

ಎಐ (ಕೃತಕ ಬುದ್ದಿಮತ್ತೆ) ಮಷಿನ್‌ ಲರ್ನಿಂಗ್‌ ಸಹಾಯದಿಂದ ಮಾರ್ಫಿಂಗ್‌ ವೀಡಿಯೋ, ಫೋಟೋ ಸೃಷ್ಟಿಸುವುದಕ್ಕೆ ಡೀಪ್‌ಫೇಕ್‌ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯಂತೆಯೇ ಸೇಮ್‌ ಟು ಸೇಮ್‌ ಡೂಪ್‌ ಸೃಷ್ಟಿಸಬಹುದು. ವೀಡಿಯೋ/ಫೋಟೋ ನೋಡಿದಾಗ ಇದು ಅಸಲಿಯೇ ಅಥವಾ ನಕಲಿಯೇ ಎಂಬುದು ತಿಳಿಯುವುದೇ ಇಲ್ಲ. ಈ ತಂತ್ರಜ್ಞಾನ ಬಳಸಿ ಯಾರನ್ನು ಬೇಕಾದರೂ ಸ್ಕ್ರೀನ್‌ ಮೇಲೆ ತೋರಿಸಬಹುದು. ಹಿಂದಿ, ಇಂಗ್ಲಿಷ್‌ ಅಷ್ಟೇ ಬರುವ ವ್ಯಕ್ತಿ ಕನ್ನಡದಲ್ಲಿ ಮಾತನಾಡಿದಂತೆಯೂ, ಹಾಡಿದಂತೆಯೂ ತೋರಿಸಬಹುದು. ಕೆಲವೊಮ್ಮೆ ಈ ತಂತ್ರಜ್ಞಾನ ಲಾಭದಾಯಕ ಎನಿಸುತ್ತದೆ. ಆದರೆ ಅಷ್ಟೇ ದುರ್ಬಳಕೆ ಕೂಡ ಆಗುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ರಶ್ಮಿಕಾ ಮಂದಣ್ಣ ಪ್ರಕರಣ.

ಈ ತಂತ್ರಜ್ಞಾನ ಉಚಿತ, ವ್ಯಾಪಕವಾಗಿ ಲಭ್ಯವಿದೆ. ಯಾವುದೇ ತಾಂತ್ರಿಕ ಪರಿಣತಿಯ ಅಗತ್ಯವಿಲ್ಲ. ಈ ಅಪ್ಲಿಕೇಶನ್‌ಗಳು ಬಳಕೆದಾರರಿಗೆ, ಚಿತ್ರಗಳನ್ನು ಡಿಜಿಟಲ್‌ ಸಹಾಯದಿಂದ ತೆಗೆದುಹಾಕಲು ಅಥವಾ ಅಶ್ಲೀಲ ವೀಡಿಯೊಗಳಲ್ಲಿ ಅವರ ಮುಖಗಳನ್ನು ಸೇರಿಸಲು ಅನುಮತಿಸುತ್ತದೆ. ಗಾಯಕ ಟೇಲರ್ ಸ್ವಿಫ್ಟ್ ಮತ್ತು ನಟಿ ಎಮ್ಮಾ ವ್ಯಾಟ್ಸನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಡೀಪ್‌ಫೇಕ್ ತಂತ್ರಜ್ಞಾನದ ಸಂತ್ರಸ್ತರಾಗಿದ್ದಾರೆ. ಡಚ್ ಎಐ ಕಂಪನಿ ಸೆನ್ಸಿಟಿಯ ಅಧ್ಯಯನದ ಪ್ರಕಾರ, ಆನ್‌ಲೈನ್‌ನಲ್ಲಿ ಸುಮಾರು 96% ಡೀಪ್‌ಫೇಕ್ ವೀಡಿಯೋಗಳು ಅಶ್ಲೀಲತೆಯಿಂದ ಕೂಡಿವೆ. ಅವುಗಳಲ್ಲಿ ಹೆಚ್ಚಿನವು ಮಹಿಳೆಯರನ್ನೇ ಚಿತ್ರಿಸಿವೆ ಎಂದಿದೆ.

ಡೀಪ್‌ಫೇಕ್‌ ಅಪರಾಧಕ್ಕೆ ಶಿಕ್ಷೆ ಏನು?
ಡೀಪ್‌ಫೇಕ್ ಸೈಬರ್‌ ಅಪರಾಧಕ್ಕೆ ಸಂಬಂಧಿಸಿದಂತೆ ಭಾರತ ಕಾನೂನಿನಲ್ಲಿ ಸ್ಪಷ್ಟವಾದ ವ್ಯಾಖ್ಯಾನ ಇಲ್ಲ. ಆದರೆ ಈ ಅಪರಾಧದ ವಿರುದ್ಧ ಇತರ ಹಲವಾರು ಕಾನೂನು ಕ್ರಮಗಳನ್ನು ಬಳಸಿಕೊಳ್ಳಬಹುದು.

* ಐಟಿ ಕಾಯಿದೆ: ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಸೆಕ್ಷನ್‌ 66ರ ಪ್ರಕಾರ, ಐಡೆಂಟಿಫಿಕೇಷನ್‌ ಥೆಫ್ಟ್‌ (ಗುರುತು ಕಳವು) ಮಾಡಿ ಅದನ್ನು ಅನ್ಯ ಉದ್ದೇಶಗಳಿಗೆ ಬಳಸಿದರೆ ಅದಕ್ಕೆ 3 ವರ್ಷ ಜೈಲು ಶಿಕ್ಷೆ. ಜೊತೆಗೆ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

* ಐಟಿ ಕಾಯಿದೆ ಸೆಕ್ಷನ್‌ 66ಇ ಪ್ರಕಾರ, ಖಾಸಗಿ ಹಕ್ಕು ಉಲ್ಲಂಘನೆಗಾಗಿ 3 ವರ್ಷ ಜೈಲು ಮತ್ತು 2 ಲಕ್ಷದ ವರೆಗೆ ದಂಡ ವಿಧಿಸಲಾಗುವುದು.

* ಹಕ್ಕುಸ್ವಾಮ್ಯ ಕಾಯಿದೆ, 1957: ಕಾಯಿದೆಯ ಸೆಕ್ಷನ್ 51 ವಿಶೇಷ ಹಕ್ಕನ್ನು ಹೊಂದಿರುವ ಇನ್ನೊಬ್ಬ ವ್ಯಕ್ತಿಗೆ ಸೇರಿದ ಯಾವುದೇ ಆಸ್ತಿಯನ್ನು ಬಳಸಿದಾಗ ಹಕ್ಕುಸ್ವಾಮ್ಯ ಕಾಯಿದೆಯ ಉಲ್ಲಂಘನೆಯಾಗಿದೆ.

* ಭಾರತೀಯ ದಂಡ ಸಂಹಿತೆ ಸೆಕ್ಷನ್‌ 153ಎ (ಧರ್ಮ, ಜಾತಿ ಮತ್ತಿತರ ಹೆಸರಿನಲ್ಲಿ ನಿಂದನೆ) ಮತ್ತು 295ಎ (ಉದ್ದೇಶಪೂರ್ವಕವಾಗಿ ಅಪಮಾನಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಬಹುದು.

* ಕಾಪಿ ರೈಟ್‌ ಕಾಯಿದೆ 1957ರ ಸೆಕ್ಷನ್‌ 16ರ ಪ್ರಕಾರ ವೀಡಿಯೋ ದುರ್ಬಳಕೆ ಮಾಡಿಕೊಂಡರೆ 3 ವರ್ಷ ಜೈಲು, 2 ಲಕ್ಷ ರೂ. ದಂಡ ವಿಧಿಸಬಹುದು.

Share This Article