ಯೋಧರ ಮನೆಯಲ್ಲಿ ಬೆಳಗಿದ ದೀಪ- ಮೂಡಬಿದಿರೆಯಲ್ಲಿ ವಿಭಿನ್ನ ರೀತಿಯ ದೀಪಾವಳಿ ಆಚರಣೆ

Public TV
3 Min Read

ಮಂಗಳೂರು: ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಗಡಿಕಾಯುವ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸಿ ಯೋಧರಿಗೂ ಶಕ್ತಿ ತುಂಬುವ ಕಾರ್ಯ ಮಾಡಿದರೆ ಇತ್ತ ಮೂಡಬಿದಿರೆಯ ಪುಟ್ಟ ಸಂಘಟನೆಯೊಂದು ಯೋಧರ ಮನೆಯಲ್ಲಿ ದೀಪಾವಳಿ ಆಚರಿಸುವ ಮೂಲಕ ಹೃದಯ ವೈಶಾಲ್ಯತೆಯನ್ನು ಮೆರೆದ ಘಟನೆ ಗುರುವಾರ ನಡೆದಿದೆ.

ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆ ಈ ಮಹತ್ಕಾರ್ಯ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ. ಮೂಡಬಿದಿರೆಯ ಮಾಸ್ತಿಕಟ್ಟೆ ನಿವಾಸಿಗಳಾದ ಶಾಂತಿರಾಜ ಹೆಗ್ಡೆ ಮತ್ತು ಐರಾವತಿದೇವಿ ಅವರ ಇಬ್ಬರು ಮಕ್ಕಳು ದೇಶದ ಗಡಿಕಾಯುವ ಮಹತ್ಕಾರ್ಯ ಮಾಡುತ್ತಿದ್ದಾರೆ. ನಮ್ಮ ಮಕ್ಕಳನ್ನು ದೇಶ ಸೇವೆಗೆ ಕಳುಹಿಸಿದ ಮಹಾನ್ ಪೋಷಕರ ಮನೆಯನ್ನೇ ಆರಿಸಿ ಅಲ್ಲಿ ಸಂಘಟನೆಯ ಸರ್ವ ಸದಸ್ಯರ ಸಮ್ಮುಖದಲ್ಲಿ ಆದರಣೀಯ ದಂಪತಿ ಸನ್ಮಾನ ನಡೆಸಿ ಗೋ ಪೂಜೆಗೈದು, ಸುಡುಮದ್ದಿನೊಂದಿಗೆ ಸಿಹಿಭಕ್ಷ್ಯ ಹಂಚಿ ಸಂಭ್ರಮೋಲ್ಲಾಸದಿಂದ ದೀಪಾವಳಿ ಆಚರಿಸುವ ಮೂಲಕ ಜವನೆರ್ ಬೆದ್ರ ಸಂಘಟನೆ ಮಾದರಿಯೆನಿಸಿತು.

ಜವನೆರ್ ಬೆದ್ರ ಸಂಘಟನೆ ಹೇಳಿದ್ದೇನು ಗೊತ್ತೇ?
ದೀಪಾವಳಿ ಬಂತೆಂದರೆ ಬೋನಸ್ ಹಿಡಿದುಕೊಂಡು ಪಟಾಕಿ ಸಿಡಿಸಿ, ದೋಸೆ ತಿಂದು ಸಖತ್ತಾಗಿ 3 ದಿನಗಳ ಕಾಲ ಕುಟುಂಬ ಸ್ನೇಹಿತರೊಂದಿಗೆ ನಾವು ಸಂಭ್ರಮಿಸುತ್ತೇವೆ. ಆದರೆ ತಮ್ಮ ಕಣ್ಣಿಗೆ ಎಣ್ಣೆ ಬಿಟ್ಟು, ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು, ಗಡಿಯಲ್ಲಿ ಶತ್ರುದೇಶದ ನರಿಗಳನ್ನು ತಮ್ಮ ಬಂದೂಕಿನ ತುದಿಯಿಂದ ದಿಟ್ಟಿಸಿ ನಮ್ಮನ್ನು ರಕ್ಷಿಸುತ್ತಿರುವ ಕಣ್ಣಿಗೆ ಕಾಣುವ ದೇವರುಗಳು ನಮ್ಮ ದೇಶದ ಯೋಧರಿಗೆ ಮಾತ್ರ ಹಬ್ಬದ ವಾತಾವರಣವೇ ಇಲ್ಲ. ಛೇ, ಈ ಹಬ್ಬಕ್ಕೂ ನಮ್ಮ ಮಕ್ಕಳೊಂದಿಗೆ ದೀಪಾವಳಿ ಆಚರಿಸೋದಕ್ಕೆ ಆಗ್ತಾ ಇಲ್ವಲ್ಲಾ ಎಂಬ ಕೊರಗು ಅವರ ಹೆತ್ತವರದ್ದು. ಇದಕ್ಕಾಗಿಯೇ ಜವನೆರ್ ಬೆದ್ರ ಸಂಘಟನೆ ಈ ಬಾರಿಯ ದೀಪಾವಳಿಯನ್ನು ಯೋಧರ ಮನೆಯಲ್ಲಿ ಆಚರಿಸಿದೆ.

ಮೂಡುಬಿದಿರೆಯ ಮಾಸ್ತಿಕಟ್ಟೆ ಸಮೀಪದ ನಿವಾಸಿಗಳಾದ ಮಹಾವೀರ್ ಜೈನ್ ಹಾಗೂ ಮಹೇಂದ್ರ ಜೈನ್ ಎಂಬವರು ಹಲವಾರು ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾವೀರ್ ಜೈನ್ ಎಂಬವರು ಕಳೆದ 20 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಮ್ಮು-ಕಾಶ್ಮೀರ, ಪಠಾಣ್ ಕೋಟ್, ಗ್ವಾಲಿಯರ್, ಅಸ್ಸಾಂ, ಹಾಗೂ ಎಟಿಸಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಆಪರೇಷನ್ ಪರಾಕ್ರಮ್ ವೇಳೆಯಲ್ಲಿ ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಬೆಂಗಳೂರಿನಲ್ಲಿ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಹೋದರ ಮಹೇಂದ್ರ ಜೈನ್ ಎಂಬವರು ಭಾರತೀಯ ಸೇನೆಯಲ್ಲಿ 14 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅರುಣಾಚಲ, ರಾಜಸ್ಥಾನ, ನಸಿರಾಬಾದ್, ಜಮ್ಮುವಿನ ಅಕ್ನೋರ್, ಮಿರಾಟ್, ಕಾಶ್ಮೀರ್, ಬಾರಮುಲ್ಲ ಸಹಿತ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಉತ್ತರ ಪ್ರದೇಶದ ಮಿರಾಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಇಬ್ಬರು ಮಕ್ಕಳನ್ನೂ ತಾಯಿ ಭಾರತೀಯ ಸೇವೆಗಾಗಿ ಗಡಿಗೆ ಕಳಿಸಿರುವ ದೇಶಭಕ್ತ ಕುಟುಂಬದೊಂದಿಗೆ ನಾವು ದೀಪಾವಳಿಯನ್ನು ಆಚರಿಸುತ್ತಿದ್ದೇವೆ ಎಂದು ಈ ಸಂಘಟನೆ ಹೇಳಿದೆ.

ಕಳಂಕರಹಿತ ಪೀಳಿಗೆ: ಇಬ್ಬರು ಮಕ್ಕಳನ್ನು ಸೇನೆಗೆ ಕಳುಹಿಸುವ ಮೂಲಕ ದೇಶಸೇವೆಯ ಕನಸು ನನಸಾಗಿದೆ. ಈ ಮಕ್ಕಳೇ ನನ್ನ ಆಸ್ತಿ. ಕಳಂಕರಹಿತ ಪೀಳಿಗೆ ಮುಂದುವರಿದಿದೆ ಎಂಬ ಹೆಮ್ಮೆ ನನಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನಲೆಯಿಂದಾಗಿ ದೇಶಪ್ರೇಮಿ ಕುಟುಂಬ ನಮ್ಮದಾಯಿತು ಎಂದು ಶಾಂತಿರಾಜ ಹೆಗ್ಡೆ ಹೇಳಿದರು. ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಮಹತ್ಕಾಯ ಇಂದಾಗುವ ಅನಿವಾರ್ಯತೆಯಿದೆ ಎಂದು ನಿವೃತ್ತ ಯೋಧ ರಾಜೇಂದ್ರ.ಜಿ ಅಭಿಪ್ರಾಯಿಸಿದರು. ಜವನೆರ್ ಬೆದ್ರ ಸಂಘಟನೆ ಸಮಾಜಮುಖೀ ಚಿಂತನೆಯೊಂದಿಗೆ, ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ ಅಭಿಪ್ರಾಯಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಪಣಪಿಲ ಕಾರ್ಯಕ್ರಮ ನಿರ್ವಹಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *