ಬೆಂಗಳೂರು: ದೀಪಾವಳಿ (Deepavali) ಹಬ್ಬದ ಹಿನ್ನೆಲೆಯಲ್ಲಿ ಜಾತಿಗಣತಿ (Caste Census) ಸಮೀಕ್ಷೆಗೆ ಅ.23ರ ವರೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ.
ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜಾತಿಗಣತಿ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅ.23ರ ವರೆಗೆ ಸಮೀಕ್ಷೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ಬೆಂಗಳೂರಿನಲ್ಲಿ ಅ.23 ರಿಂದ 31 ರವರೆಗೆ ಸಮೀಕ್ಷೆ ಮುಂದುವರಿಕೆ ಆಗಲಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಸಭೆ ಮಾಡಿದರು 27 ಜಿಲ್ಲೆಯಲ್ಲಿ 90% ಜಾಸ್ತಿ ಆಗಿದೆ. ರಾಮನಗರ, ಬೀದರ್, ಬೆಂಗಳೂರು ಅರ್ಬನ್ ಕಡಿಮೆ ಆಗಿದೆ. ಬೆಂಗಳೂರು ಅರ್ಬನ್ 50% ಆಗಿದೆ. ಬೆಂಗಳೂರಿನಲ್ಲಿ ಅ.23 ರಿಂದ 31 ರವರೆಗೆ ಗಣತಿ ಮಾಡಲು ಸೂಚನೆ ನೀಡಲಾಗಿದೆ. ಶಿಕ್ಷಕರಿಗಿಲ್ಲ, ಬೇರೆ ಸ್ಟಾಫ್‌ಗಳ ಕೈಲಿ ಸಮೀಕ್ಷೆ ಮಾಡಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸಮೀಕ್ಷೆ ಮಂದಗತಿಯಲ್ಲಿ ಸಾಗ್ತಿರೋದಕ್ಕೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ನಗರದಲ್ಲಿ ಇಲ್ಲಿವರೆಗೂ ಆಗಿರುವ ಸರ್ವೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಯಾಕಿಷ್ಟು ನಿಧಾನ ಆಗ್ತಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಸಮೀಕ್ಷೆಗೆ ಇನ್ನೂ ಅವಕಾಶ ಕೊಡ್ತಿದ್ದೇವೆ. ಯಾರು ಯಾರು ಭಾಗಹಿಸಲ್ಲವೋ ಅವರು ಎಲ್ಲರೂ ಭಾಗವಹಿಸಬೇಕು. ಎಲ್ಲಾ ಸಮಾಜದವರು ಇರುವ ಅವಕಾಶ ಕಳೆದುಕೊಳ್ಳೋಕೆ ಹೋಗಬೇಡಿ. ಬೆಂಗಳೂರು ದಕ್ಷಿಣ, ಬೀದರ್, ಧಾರವಾಡ ಬಿಟ್ಟು ಉಳಿದ ಕಡೆ ಚೆನ್ನಾಗಿ ಆಗಿದೆ. ಅದಕ್ಕಾಗಿ ಇವಾಗ ಮತ್ತೆ 31 ರವರೆಗೆ ವಿಸ್ತರಣೆ ಮಾಡಿದ್ದೇವೆ. ಅ.21, 22, 23 ಹಬ್ಬದ ರಜೆ ಇದೆ. ಅವತ್ತು ಸಮೀಕ್ಷೆ ಇರಲ್ಲ. ಶಿಕ್ಷಕರು ಇರಲ್ಲ, ಬೇರೆ ನೌಕರರು ಬಳಸಿಕೊಂಡು ಸಮೀಕ್ಷೆ ಮಾಡಬೇಕು. ನಂತರ ಅ.24 ರಿಂದ 31ರವರೆಗೆ ಸಮೀಕ್ಷೆ ಮುಂದುವರಿಯಲಿದೆ. ಎಲ್ಲರು ಕೂಡ ಮಾಹಿತಿ ಕೊಡಬೇಕು ಎಂದು ತಿಳಿಸಿದ್ದಾರೆ.