ದೀಪಾವಳಿ ಸ್ಪೆಷಲ್; ಸುಲಭವಾಗಿ ಮಾಡಿ ಕಾಜು ಬರ್ಫಿ

Public TV
2 Min Read

ಭಾರತದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬ ಎಂದರೆ ಅದು ದೀಪಾವಳಿ. ಈ ಹಬ್ಬದಲ್ಲಿ ಜನರು ಪರಸ್ಪರ ಸಿಹಿ ತಿನ್ನಿಸುವ ಮೂಲಕ ಹಬ್ಬದ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಸಿಹಿ ಮತ್ತು ಪಟಾಕಿ ಇಲ್ಲದೇ ದೀಪಾವಳಿ ಅಪೂರ್ಣ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ದೀಪಾವಳಿ ಹಬ್ಬದ ದಿನ ಹೆಚ್ಚಿನವರು ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ.

ವಿಶೇಷವಾಗಿ ದೀಪಾವಳಿ ಹಬ್ಬದಲ್ಲಿ ಸಿಹಿ ತಿಂಡಿ ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದೇ ಕಾಜು ಬರ್ಫಿ. ಸಾಮಾನ್ಯವಾಗಿ ಕಾಜು ಬರ್ಫಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ನೀವು ಈ ಸಿಹಿಯನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಆರೋಗ್ಯದ ದೃಷ್ಟಿಯಿಂದ ಇದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಕಾಜು ಬರ್ಫಿ ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ.

ಬೇಕಾಗುವ ಸಾಮಾಗ್ರಿಗಳು :
ಗೋಡಂಬಿ – 250 ಗ್ರಾಂ
ಹಾಲಿನ ಪುಡಿ – 4 ಕಪ್
ಸಕ್ಕರೆ – 4 ಕಪ್
ಏಲಕ್ಕಿ ಪುಡಿ – 4 ಚಮಚ
ತುಪ್ಪ – 2 ಚಮಚ
ಸಿಲ್ವರ್ ಪೇಪರ್/ಬೆಳ್ಳಿ ಲೇಪನ

ಮಾಡುವ ಸುಲಭ ವಿಧಾನ:
*ಮೊದಲನೆಯದಾಗಿ ಗೋಡಂಬಿಯನ್ನು ತೆಗೆದುಗೊಂಡು ಅದನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಅದನ್ನು ಜರಡಿಯಲ್ಲಿಟ್ಟು ಶೋಧಿಸಿಕೊಳ್ಳಿ. ಶೋಧಿಸಿಟ್ಟ ಗೋಡಂಬಿ ಪುಡಿಗೆ ಅರ್ಧ ಕಪ್ ಹಾಲಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಂಡು ಪಕ್ಕಕ್ಕೆ ಇಟ್ಟುಬಿಡಿ.
*ಬಳಿಕ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ನಿಮ್ಮ ಸಿಹಿಗೆ ಅನುಗುಣವಾಗಿ ಸಕ್ಕರೆಯನ್ನು ಹಾಕಿಕೊಳ್ಳಿ ಮತ್ತು ಸಕ್ಕರೆ ಕರಗಲು ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ. ಸಕ್ಕರೆ ಪಾಕ ತಯಾರಾಗುವವರೆಗೂ ಚೆನ್ನಾಗಿ ಬೆರೆಸಿಕೊಳ್ಳಿ.
*ಸಕ್ಕರೆ ಕರಗಿದ ಬಳಿಕ ಮೊದಲೇ ತಯಾರಿಸಿಟ್ಟ ಗೋಡಂಬಿ ಪುಡಿ ಮತ್ತು ಹಾಲಿನ ಪುಡಿ ಮಿಶ್ರಣವನ್ನು ಇದಕ್ಕೆ ಸೇರಿಸಿಕೊಂಡು, ಈ ಮಿಶ್ರಣ ಗಂಟುಕಟ್ಟಿಕೊಳ್ಳದ ಹಾಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
*ಈಗ ಈ ಮಿಶ್ರಣಕ್ಕೆ 1 ಚಮಚ ತುಪ್ಪ ಮತ್ತು 4 ಚಮಚ ಏಲಕ್ಕಿ ಪುಡಿಯನ್ನು ಸೇರಿಸಿಕೊಂಡು ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ಬರ್ಫಿ ಮಿಶ್ರಣ ತಳ ಬಿಡಲು ಆರಂಭಿಸಿದಾಗ ಗ್ಯಾಸ್ ಆಫ್ ಮಾಡಿ.
*ಈಗ ಒಂದು ಟ್ರೇ ಅಥವಾ ಬಟ್ಟಿಲಿಗೆ ತುಪ್ಪವನ್ನು ಸವರಿ (ಟ್ರೇ ಮೇಲೆ ಬಟರ್ ಪೇಪರ್ ಕೂಡಾ ಹಾಕಬಹುದು) ಅದರ ಮೇಲೆ ಬರ್ಫಿ ಮಿಶ್ರಣವನ್ನು ಹಾಕಿ, ಚೆನ್ನಾಗಿ ಸೆಟ್ ಮಾಡಿಕೊಳ್ಳಿ, ಈಗ ಅದರ ಮೇಲೆ ಬೆಳ್ಳಿ ಲೇಪನವನ್ನು ಅಂಟಿಸಿ, ಬರ್ಫಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಬರ್ಫಿಯನ್ನು ನಿಮಗೆ ಬೇಕಾದ ಆಕಾರದಲ್ಲಿ ತುಂಡರಿಸಿ ಮನೆಯವರಿಗೆ ಬಡಿಸಿ.

Share This Article