ದೀಪಾವಳಿ ವಿಶೇಷ – ಬಲಿಪಾಡ್ಯಮಿಯನ್ನು ಯಾಕೆ ಆಚರಿಸಲಾಗುತ್ತದೆ? ಏನಿದು ಪುರಾಣ ಕಥೆ?

Public TV
3 Min Read

ದೀಪಾವಳಿಯನ್ನು (Deepavali) ಒಟ್ಟು ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಮನೆಯವರೆಲ್ಲರೂ ಎಣ್ಣೆ ಸ್ನಾನ ಮಾಡುವ ನರಕ ಚತುದರ್ಶಿ, ಮರು ದಿವಸ ಅಮಾವಾಸ್ಯೆ, ಮೂರನೇ ದಿನವೇ ಬಲಿ ಪಾಡ್ಯಮಿ. ದೀಪಾವಳಿ ಬಲಿಪಾಡ್ಯಮಿಯೊಂದಿಗೆ (Balipadyami) ಈ ಮೂರು ದಿನಗಳ ಹಬ್ಬ ಮುಗಿಯುತ್ತದೆ. ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗುತ್ತದೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ.

ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುವಿನ ಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ (Bali Maharaja) ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ. ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ತಲೆಗೆ ಏರುತ್ತದೆ. ಬಲಿ ರಾಜನ ಸುತ್ತಮುತ್ತಲಿರುವವರೆಲ್ಲ ಕೆಟ್ಟವರಾಗಿರುತ್ತಾರೆ. ತಾನು ಕೆಟ್ಟವನಲ್ಲದಿದ್ದರೂ ತನ್ನ ಸುತ್ತಲಿನ ರಾಕ್ಷಸರು ಮಾಡುತ್ತಿರುವ ಕೆಲಸಗಳನ್ನು ಪರೋಕ್ಷವಾಗಿ ಆತ ಪ್ರೋತ್ಸಾಹ ನೀಡುತ್ತಿರುತ್ತಾನೆ. ಇವರ ಕಾಟ ಹೆಚ್ಚಾಗುತ್ತಿದ್ದಂತೆ ಹೇಗಾದರೂ ಮಾಡಿ ಬಲಿಯನ್ನು ಸಂಹಾರ ಮಾಡಬೇಕೆಂದು ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ.

ದೇವತೆಗಳಿಗೆ ಅಭಯ ನೀಡಿದ ವಿಷ್ಣು ವಾಮನನ (ಬಾಲಕ) ರೂಪದಲ್ಲಿ ಬಲಿ ಮಹಾರಾಜನ ಬಳಿ ಬಂದು ದಾನವನ್ನು ಕೇಳುತ್ತಾನೆ. ಬಲೀಂದ್ರ ರಾಜ ಕೊಡುಗೈ ದಾನಿ. ನಿನಗೆ ಏನು ಬೇಕೆಂದು ಕೇಳು ಎಂದು ವಾಮನನಿಗೆ (Vamana) ಹೇಳುತ್ತಾನೆ. ಆಗ ವಾಮನ, ನನ್ನ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ನೀಡಬಹುದೇ ಎಂದು ಕೇಳುತ್ತಾನೆ.  ಇದನ್ನೂ ಓದಿ: ದೀಪಾವಳಿ: ವ್ಯಾಪಾರ ವೃದ್ಧಿಗೆ ಮಾಡಿ ಧನಲಕ್ಷ್ಮಿ ಪೂಜೆ

ಪ್ರಜಾಪರಿಪಾಲನೆಯಲ್ಲಿ ಹೆಸರು ಮಾಡಿರುವ ನನಗೆ ಈ ಪುಟ್ಟ ಬಾಲಕನ ಬೇಡಿಕೆಯನ್ನು ಈಡೇರಿಸುವ ಯೋಗ್ಯತೆ ಇಲ್ವಾ ಎಂಬ ಅಹಂಕಾರದಿಂದ ಬಲೀಂದ್ರ ಮಹಾರಾಜ ವಾಮನನಿಗೆ, ನೀನು ಕೇಳಿದ ಮೂರು ಹೆಜ್ಜೆ ಊರುವಷ್ಟು ಜಾಗ ನೀಡುತ್ತೇನೆ ಎಂದು ವಚನವನ್ನು ಕೊಡುತ್ತಾನೆ.

ಭೂಮಿಯನ್ನು ದಾನ ಪಡೆಯುವಾಗ ವಾಮನಮೂರ್ತಿ ಆಕಾಶದ ಉದ್ದಕ್ಕೂ ಬೆಳೆಯುತ್ತಾನೆ. ಒಂದು ಪಾದವನ್ನು ಭೂಮಿ ಮೇಲೆ, ಮತ್ತೊಂದು ಪಾದವನ್ನು ಆಕಾಶದ ಮೇಲೆ ಇರಿಸುತ್ತಾನೆ. ಇನ್ನೊಂದು ಪಾದ ಇಡಲು ಜಾಗ ಕಾಣುತ್ತಿಲ್ಲ ಎಲ್ಲಿ ಇಡಬೇಕು ಎಂದು ಕೇಳಿದಾಗ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ನನ್ನ ತಲೆ ಮೇಲೆ ಪಾದ ಇಡು ಎಂದು ಹೇಳುತ್ತಾನೆ.

ನನ್ನ ತಲೆ ಮೇಲೆ ನಿಮ್ಮ ಪಾದ ಇಡುವ ಮೂಲಕ ನನ್ನಲ್ಲಿರುವ ಅಹಂಕಾರವೆಲ್ಲ ನಾಶವಾಗಲಿ ಎಂದು ವಾಮನನ ಬಳಿ ಬಲಿ ಕ್ಷಮೆ ಕೇಳುತ್ತಾನೆ. ವಾಮನ ತನ್ನ ಪಾದವನ್ನು ಬಲೀಂದ್ರ ಮಹಾರಾಜನ ಮೇಲೆ ಇರಿಸಿ ಪಾತಾಳಕ್ಕೆ ಕಳುಹಿಸುತ್ತಾನೆ.

ತಲೆ ಮೇಲೆ ಕಾಲನ್ನು ಇಡುವ ಮುನ್ನ ವಾಮನ ಬಳಿ ಬಲಿ, ನಾನು ನನ್ನ ಮಕ್ಕಳಂತೆ ಪ್ರಜೆಗಳನ್ನು ನೋಡಿದ್ದೇನೆ. ಹೀಗಾಗಿ ಪ್ರಜೆಗಳನ್ನು ನೋಡಲು ಅವಕಾಶ ನೀಡಬೇಕೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಈ ಪ್ರಾರ್ಥನೆ ಸ್ವೀಕರಿಸಿದ ವಾಮನ ಅಸ್ತು ಎಂದು ಹೇಳಿ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ.  ಇದನ್ನೂ ಓದಿ: ದೀಪಾವಳಿಯಲ್ಲಿ ಗೋಪೂಜೆಯ ಮಹತ್ವವೇನು?

 

ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಅದೇನೆಂದರೆ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆ ಮಾಡುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯ. ಇದನ್ನು ಬಲಿರಾಜ್ಯವೆಂದು ಹೇಳುತ್ತಾರೆ. ಆ ರೀತಿ ಆಚರಿಸಲ್ಪಡುವ ಕೊನೆಯ ದಿನವೇ ಬಲಿಪಾಡ್ಯಮಿ. ಈ ಅವಧಿಯಲ್ಲಿ ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ.

ದೀಪಾವಳಿಯ ದಿನದಂದು ಪ್ರಜೆಗಳನ್ನು ನೋಡಲು ಬಲೀಂದ್ರ ಮಹಾರಾಜ ಬರುತ್ತಾನೆ ಎಂಬ ನಂಬಿಕೆಯಿಂದ ಜನರು ಅಭ್ಯಂಜನ ಸ್ನಾನಾದಿಗಳನ್ನು ಮಾಡಿಕೊಂಡು ಮನೆಯ ಎಲ್ಲ ಪಾತ್ರೆಗಳಲ್ಲಿ ಶುದ್ಧವಾದ ನೀರನ್ನು ತುಂಬಿಸುತ್ತಾರೆ. ಎಣ್ಣೆ ಸ್ನಾನ ಮಾಡುವಾಗ ಸಪ್ತ ಚಿರಂಜೀವಿಗಳನ್ನು ಹೇಳುವ ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಶ್ಛ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೇತೇಃ ಚಿರಂಜೀವಿನಃ | ಶ್ಲೋಕವನ್ನು ಹೇಳುತ್ತಾರೆ. ಹಿಂದೂ ಪುರಾಣಗಳ ಪ್ರಕಾರ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಏಳು ಪೌರಾಣಿಕ ವ್ಯಕ್ತಿಗಳನ್ನು ಚಿರಂಜೀವಿಗಳು ಎಂದು ನಂಬಲಾಗಿದೆ. ಅಶ್ವತ್ಥಾಮ, ಬಲೀಂದ್ರ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮನನ್ನು ಸ್ತುತಿಸಿದರೆ ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.

 

Share This Article