ದೀಪಕ್ ರಾವ್ ಹತ್ಯೆ ಪ್ರಕರಣ- ಪೊಲೀಸರ ಕೆಲಸವನ್ನು ಶ್ಲಾಘಿಸಿದ ಸಚಿವ ಆಂಜನೇಯ

Public TV
1 Min Read

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕೆಲಸ ಶ್ಲಾಘನೀಯ ಎಂದು ಸಚಿವ ಆಂಜನೇಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವರು, ಹತ್ಯೆ, ಸಾವು ಯಾವುದೂ ಆಗಬಾರದು. ಕೊಲೆ ಹಿಂದಿನ ಸತ್ಯ ತನಿಖೆಯಲ್ಲಿ ಬೆಳಕಿಗೆ ಬರುತ್ತೆ. ಸಾವಿನಲ್ಲಿ ಯಾವುದೇ ರಾಜಕೀಯ ಮಾಡಬಾರದು. ಘಟನೆಯಾದ ಕೆಲವೇ ಗಂಟೆಯಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕೆಲಸ ನಿಜಕ್ಕೂ ಶ್ಲಾಘನೀಯವಾಗಿದೆ ಅಂದ್ರು.

ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರುತ್ತದೆ. ಬಳಿಕ ತಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿದೆ ಅಂತ ಅವರು ಹೇಳಿದ್ರು.

ಇದೇ ವೇಳೆ ತನ್ನ ರಾಜಕೀಯ ನಡೆಯ ಬಗ್ಗೆ ಮಾತನಾಡಿದ ಅವರು, ನಾನು ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ಹೊಳಲ್ಕೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನನ್ನ ಜಿಲ್ಲೆ ಚಿತ್ರದುರ್ಗ. 44 ವರ್ಷದಿಂದ ಇಲ್ಲೆ ರಾಜಕೀಯ ಮಾಡಿದ್ದೇನೆ. ಸೋಲು, ಗೆಲುವು ಮಂತ್ರಿ ಸ್ಥಾನ ಎಲ್ಲವನ್ನು ಇದೇ ಕ್ಷೇತ್ರ ಕೊಟ್ಟಿದೆ. ನನ್ನ ಅಭಿಮಾನಿಗಳು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಕೇಳಿಕೊಳ್ತಿದ್ದಾರೆ. ಆದ್ರೆ ನಾನು ಕ್ಷೇತ್ರ ಬದಲಾಯಿಸೊಲ್ಲ. ಹೀಗಾಗಿ ಹೊಳಲ್ಕೆರೆಯಿಂದಲೇ ಈ ಬಾರಿ ಸ್ಪರ್ಧೆ ಮಾಡಿ ಗೆಲ್ತೀನಿ ಅಂತ ತಿಳಿಸಿದ್ರು.

ಬಹುಮಾನ ಘೋಷಣೆ: ದೀಪಕ್ ರಾವ್ ಹತ್ಯೆ ಪ್ರಕರಣ ಭೇದಿಸುವಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರನ್ನು ಎಡಿಜಿಪಿ ಕಮಲ್ ಪಂತ್ ಅವರು ಪ್ರಶಂಸಿಸಿದ್ದು, ರೂ.1,20,000 ಬಹುಮಾನ ಘೋಷಣೆ ಮಾಡಿದ್ದಾರೆ. ದೀಪಕ್ ಹತ್ಯೆ ನಡೆದ 5 ಗಂಟೆಗಳ ಒಳಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದರು. ಗೃಹ ರಕ್ಷಕ ದಳದ ಸಿಬ್ಬಂದಿ ಹರೀಶ್ ಸೇರಿದಂತೆ ಒಟ್ಟು 6 ಮಂದಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *